Friday, 8 March 2019

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ


ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತೆ ನೋಡಬಹುದು. ಮೊತ್ತಮೊದಲ ಹಂತವು " ಇಂಡಸ್" ಹಂತ. ನಂತರದ ಹಂತಗಳೆಂದರೆ ವೇದ, ಉಪನಿಷತ್, ಬೌದ್ಧ, ಪುರಾಣ, ಭಕ್ತಿ , ಓರಿಯಂಟಲಿಸ್ಟ್ ಹಾಗೂ ಕೊನೆಯದಾಗಿ ಆಧುನಿಕ ಹಂತ. ಇಂಡಸ್ - ಸರಸ್ವತಿ ನಾಗರೀಕತೆಯ ಪಳೆಯುಳುಕೆಗಳು ಹಿಂದೂಗಳಿಗೆ ಇವತ್ತಿಗೂ ಪವಿತ್ರವಾದದ್ದೆಂದು ಪರಿಗಣಿಸುವ ಪುರಾತನ ಪ್ರತಿಮಾಶಾಸ್ತ್ರವನ್ನು ಬಹಿರಂಗ ಪಡಿಸುತ್ತದೆ. ಆದರೆ ಆಗಿನ ಸಮಯದ ಬಹುತೇಕ ಜ್ಞಾನವು ಊಹಾತ್ಮಕವಾಗೇ ಇದೆ. ಅನಂತರದ ಮೂರು ಹಂತಗಳಾದ ವೇದ, ಉಪನಿಷತ್ತ್ ಹಾಗೂ ಬೌದ್ಧ ಹಂತಗಳನ್ನು ವೇದಕಾಲದ ಹಿಂದೂ ಎಂಬುದಾಗಿ ವರ್ಗೀಕರಿಸಬಹುದುಈ ಕಾಲದಲ್ಲಿ ಯಾವುದೇ ಮಂದಿರ / ದೇವಸ್ಥಾನಗಳ ಕಲ್ಪನೆ ಇರಲಿಲ್ಲ ಹಾಗೂ ದೇವರ ಬಗ್ಗೆ ಕೇವಲ ಅಮೂರ್ತ ಕಲ್ಪನೆ ಇತ್ತು. ಕಡೆಯ ನಾಲ್ಕು ಹಂತಗಳಾದ ಪುರಾಣದ ಹಂತ, ಭಕ್ತಿ ಹಂತ, ಓರಿಯಂಟಲಿಸ್ಟ್ ,ಹಾಗೂ ಆಧುನಿಕ ಹಂತಗಳನ್ನು ಪುರಾಣಕಾಲದ ಹಿಂದೂ ಎಂದು ವರ್ಗೀಕರಿಸಲಾಗಿದೆ. ಈ ಕಾಲದಲ್ಲಿ ಮಂದಿರ / ದೇವಸ್ಥಾನಗಳ ನಿರ್ಮಾಣ, ವ್ಯಕ್ತಿಗತ ದೇವರುಗಳಾದ ಶಿವ ಅಥವಾ ಅವನ ಪುತ್ರರು, ವಿಷ್ಣು ಅಥವಾ ಅವನ ದಶಾವತಾರಗಳಲ್ಲೊಂದು ಅಥವಾ ದೇವಿಯರು ಹಾಗೂ ಅವರ ಸ್ಥಳೀಯ ಅನೇಕ ರೂಪಗಳನ್ನು ಪೂಜಿಸುವ ಸಂಪ್ರದಾಯವು ಉದಯವಾಯಿತು. ಇಲ್ಲಿಯವರೆಗಿನ ಪುರಾಣ ಕಾಲದ ಹಿಂದೂ ಅವಧಿಯನ್ನು ಗೀತೆಯ ಹಿಂದಿನ ಯುಗವೆಂದು ವರ್ಗೀಕರಿಸಬಹುದು ಹಾಗೂ ನಂತರದ ಅವಧಿಯನ್ನು ಗೀತೆಯ ನಂತರದ ಅವಧಿಯೆಂದು ಹಿಂದೂ ಚರಿತ್ರೆಯಲ್ಲಿ ಗೀತೆಯ ಪ್ರಮುಖ ಪಾತ್ರವನ್ನು ಗುರುತಿಸುವ ಸಲುವಾಗಿ ಪರಿಗಣಿಸಬಹುದು.

ವೇದಕಾಲದ ಹಂತವು ಸುಮಾರು 4000 ವರ್ಷಗಳಿ ಗಿಂತ ಮುಂಚಿತವಾಗಿ, ಉಪನಿಷತ್ ಹಂತವು 3000 ವರ್ಷ, ಬೌದ್ಧ ಹಂತವು 2500  ವರ್ಷ, ಪೌರಾಣಿಕ ಹಂತವು 2000 ವರ್ಷ, ಭಕ್ತಿ ಹಂತವು 1000 ವರ್ಷ, ಓರಿಯಂಟಲಿಸ್ಟ್ ಹಂತವು 200 ವರ್ಷ. ಆಧುನಿಕ ಹಂತವು ಭಾರತೀಯರು ಇಲ್ಲಿಯವರೆಗಿನ ಪಾಶ್ಚಿಮಾತ್ಯ ಚೌಕಟ್ಟಿನಲ್ಲೇ ಅರ್ಥೈಸಿದ್ದ ಹಿಂದೂ ಧರ್ಮದ ಮೇಲೆ   ಪ್ರಶ್ನೆ ಎತ್ತುವುದರೊಂದಿಗೆ ಇದೀಗ ತಾನೇ ಪ್ರಾರಂಭ ವಾಗಿದೆ.

ಹಿಂದೂ ಧರ್ಮದ ಕಾಲವನ್ನು ನಿರ್ಧರಿಸುವುದು ಒಂದು ಅಂದಾಜು ಮಾತ್ರ ಹಾಗೂ ಇವುಗಳು ಊಹಾತೀತ ವಾಗಿಲ್ಲ. ಏಕೆಂದರೆ ಬಾಯಿಂದ ಬಾಯಿಗೆ ವರ್ಗಾಂತರವಾದ ಗ್ರಂಥಗಳು ಅನೇಕ ಶತಮಾನದ ನಂತರವೇ ಬರಹದ ಮೂಲಕ ಪ್ರಕಟಗೊಂಡಿತು ಹಾಗೂ ಹಲವು ಬರಹದ ಮೂಲಕ ಹೊರಬಂದ ಕೃತಿಗಳನ್ನು ಹಲವಾರು ತಲೆಮಾರುಗಳ ಹಾಗೂ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಚಿಸಲ್ಪಟ್ಟಿದೆ. ಪ್ರತಿಯೊಂದೂ ಒಂದು ರೀತಿಯಲ್ಲಿ ಕಗ್ಗಂಟಾಗಿದೆ ಏಕೆಂದರೆ ಭಾರತದಲ್ಲಿ ಬರವಣಿಗೆಯ ಯುಗವು ಪ್ರಾರಂಭವಾದದ್ದೇ ಸುಮಾರು 2300 ವರ್ಷಗಳ ಹಿಂದೆ ಮಾತ್ರ, ಮೌರ್ಯ ಚಕ್ರವರ್ತಿ ಅಶೋಕನು ಬ್ರಾಹ್ಮೀ  ಹಸ್ತಾಕ್ಷರವನ್ನು ತನ್ನ ಶಾಸನಗಳ ಮೂಲಕ ಜನಪ್ರಿಯ ಗೊಳಿಸಿದ ನಂತರ.

ಐತಿಹಾಸಿಕ ಮಾರ್ಗದಲ್ಲಿ ಹಿಂದೂಧರ್ಮದ ಕಾಲವನ್ನು ನಿರ್ಧರಿಸುವುದು ಎಲ್ಲ ಹಿಂದೂ ಧರ್ಮದವರಿಗೂ ಸಮ್ಮತವಾಗುವುದಿಲ್ಲ. ಕೆಲವರ ಅಭಿಮತದಂತೆ ಹಿಂದೂ ಧರ್ಮಕ್ಕೆ ಕಾಲದ ಮಿತಿಯಿಲ್ಲ. ಮತ್ತೆ ಕೆಲವು ಕಟ್ಟಾ ಹಿಂದೂ ಅಭಿಮಾನಿಗಳ ಪ್ರಕಾರ ಹಿಂದೂ ಧರ್ಮದ ಕ್ರಿಯೆಗಳು, ಕಥೆಗಳು, ಮೂರ್ತಿಗಳು, ವೇದ ಅಥವಾ ಪುರಾಣಗಳು ಒಂದೇ ಕಾಲದಲ್ಲಿ ಸುಮಾರು 5000 ವರ್ಷಗಳ ಹಿಂದೆಯೇ ಸೃಷ್ಟಿಯಾಯಿತೆಂಬ ವಾದ. ಚರಿತ್ರೆಯು ಪ್ರತಿಯೊಬ್ಬರ ಸತ್ಯವನ್ನು ಅರಸುತ್ತದೆ ಆದರೆ ಅದರ ಮುಂದಿರುವ ಅಂಶಗಳು ಸೀಮಿತವಾಗಿರುತ್ತದೆ.
ಎಷ್ಟೋಬಾರಿ ಚರಿತ್ರೆ ಎಂದು ಭಾವಿಸುವ ಕಥೆಗಳು, ಘಟನೆಗಳು, ಪೌರಾಣಿಕವಾಗಿರಬಹುದು ಅಥವಾ ಬೇರೆಯವರ ನೆನಪಿನಿಂದ ಹೊರಬಂದ ಇಲ್ಲವೇ ಆಸೆಗಳು, ಭಾವನೆಗಳೂ ಸಹ ಚರಿತ್ರೆಯೆಂದು ಪ್ರಚಲಿತವಾಗಬಹುದು. ಏನೇ ಆದರೂ ಇದು ಕೇವಲ ಕಲ್ಪನೆಯೇ ಹೊರತು ನಿಜವಲ್ಲ.

ಮೂಲ : ದೇವದುತ್ ಪಾಟ್ನಾಯಕ್ ಅವರ 'ಮೈ ಗೀತ' ಕೃತಿಯಿಂದ ಆಯ್ದ ಭಾಗಗಳ ಕನ್ನಡಾನುವಾದ.


ಸಂಬಂಧಗಳು - ಒಂದು ವಿಶ್ಲೇಷಣೆ


ಸಂಬಂಧಗಳು - ಒಂದು ವಿಶ್ಲೇಷಣೆ

ಸಂಬಂಧಗಳು ಎಂದ ಕೂಡಲೇ ನಮ್ಮ ಮನಸ್ಸಿಗೆ ಹೊಳೆಯುವುದು ಮನುಷ್ಯ - ಮನುಷ್ಯರ ನಡುವಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಒಡನಾಟಗಳು. ಅನೇಕ ವಿಧವಾದ ಸಂಬಂಧಗಳು ಉಂಟಾಗಬಹುದು.
ಒಬ್ಬ ವ್ಯಕ್ತಿಗೆ ಉಂಟಾಗಬಹುದಾದ ಸ್ವಾಭಾವಿಕ ಸಂಬಂಧಗಳೆಂದರೆ -

. ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ ಇತ್ಯಾದಿ - ಇವುಗಳು ರಕ್ತ ಸಂಬಂಧಗಳು
. ಸ್ನೇಹಿತ, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಇತ್ಯಾದಿ - ಇವುಗಳು ಸಾಮಾಜಿಕ ಸಂಬಂಧಗಳು

ಈ ಜಗತ್ತನ್ನು ಪ್ರವೇಶಿಸುವ ವ್ಯಕ್ತಿಯೊಬ್ಬನಿಗೆ ತನ್ನ ಬದುಕಿನ ಉದ್ದಕ್ಕೂ ಸ್ಥಾಪಿಸಿಕೊಳ್ಳುವ ಸಂಬಂಧಗಳು ಹತ್ತು ಹಲವಾರು. ಈ ಸಂಬಂಧದ ಪರಿಕಲ್ಪನೆಯು ಅದರ ಸ್ವರೂಪದ ನಿಷ್ಕರ್ಷೆಯೊಂದಿಗೆ ಪ್ರಾರಂಭವಾಗಬೇಕಾಗುತ್ತದೆ. ಈ ವಿಧದ ಸಂಬಂಧಗಳಿಗೆ ಮೂಲತಃ ಜೈವಿಕ ಹಾಗೂ ಭಾವನಾತ್ಮಕ ನೆಲೆಗಳಿರುತ್ತವೆ.

ಮೇಲೆ ತಿಳಿಸಿದ ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ ಇತ್ಯಾದಿ ವಿಧದ ಸಂಬಂಧಗಳು ಜೈವಿಕ ಸಂಬಂಧಗಳು ಹಾಗೂ ಈ ವಿಧದ ಸಂಬಂಧಗಳ ಮೇಲೆ ವ್ಯಕ್ತಿಯ ಯಾವುದೇ ನಿಯಂತ್ರಣ ಇರುವುದಿಲ್ಲ. ಹುಟ್ಟುವ ವ್ಯಕ್ತಿಯು ಇಂಥವರೇ ತನ್ನ ತಂದೆ ತಾಯಿಗಳೆಂದು ಆರಿಸಿಕೊಂಡು ಬರಲಾಗುವುದಿಲ್ಲ. ಅದು ಅವನ ನಿಯಂತ್ರಣದಲ್ಲಿರುವುದಿಲ್ಲ. ಈ ವಿಧವಾದ ಜೈವಿಕ ಸಂಬಂಧಗಳ ಜೊತೆ ಜತೆಗೇ ಭಾವನಾತ್ಮಕ ಸಂಬಂಧಗಳು ಅಪ್ರಜ್ಞಾಪೂರ್ವಕವಾಗಿ ಬೆಳೆದುಕೊಳ್ಳತೊಡಗುತ್ತದೆ. ತಾಯಿಗೆ ತನ್ನ ಮಗುವಿನ ಮೇಲಿನ ಮಮತೆ, ಪ್ರೀತಿ, ವಾತ್ಸಲ್ಯಗಳು ಬೆಸುಗೆಗೊಳ್ಳತೊಡಗುತ್ತದೆ.  ಈ ವಿಧದ ಭಾವನೆಗಳು ಸಂಬಂಧಗಳ ಮೂಲಕ ಹುಟ್ಟಿಕೊಳ್ಳುತ್ತವೆ.  ಈ ವಿಧದ ಭಾವನಾತ್ಮಕ ಸಂಬಂಧಗಳು ಹುಟ್ಟಿನೊಂದಿಗೆ ಬರುವುದಿಲ್ಲ. ಅವುಗಳನ್ನು ವ್ಯಕ್ತಿಯು ಕಾಲ ಕ್ರಮದಲ್ಲಿ ಬೆಳೆಸಿಕೊಳ್ಳುತ್ತಾನೆ. ಅಂದರೆ ಭಾವಗಳು ಮೊದಲು ಹುಟ್ಟಿ ನಂತರ ವ್ಯಕ್ತಿಯು ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ಭಾವನಾತ್ಮಕ ಸಂಬಂಧಗಳ ಪಟ್ಟಿಯಲ್ಲಿ ಮೇಲೆ ತಿಳಿಸಿದ ಸ್ನೇಹಿತ, ಗುರುಗಳು, ಸಹೋದ್ಯೋಗಿ, ಸಹಪಾಠಿ ಇತ್ಯಾದಿ ಸಂಬಂಧಗಳು ಸೇರುತ್ತವೆ. ಈ ವಿಧವಾದ ಸಂಬಂಧಗಳ ಮೂಲಕ ವ್ಯಕ್ತಿಯು ತನ್ನ ಆಶೋತ್ತರಗಳು, ಕನಸುಗಳು, ಭಾವತೀವ್ರತೆಯ ಕ್ಷಣಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾನೆ.
ಈ ವಿಧದ ಭಾವನಾತ್ಮಕ ಸಂಬಂಧಗಳ ಪೈಕಿ ಜೀವನ ಸಂಗಾತಿ - ಗಂಡ ಅಥವಾ ಹೆಂಡತಿಯ ಸಂಬಂಧಗಳು ಉತ್ಪತ್ತಿಯಾಗಬಹುದಲ್ಲವೇ?

ಈಗ ಉತ್ಪತ್ತಿಯಾಗುವ ಮುಖ್ಯ ಪ್ರಶ್ನೆಯೆಂದರೆ ಜೈವಿಕ, ಭಾವನಾತ್ಮಕ ಸಂಬಂಧಗಳು ಎಲ್ಲಿಯವರೆಗೆ ಇರುತ್ತದೆ ಎಂಬುದು.

ವ್ಯಕ್ತಿಯು ಹುಟ್ಟಿನೊಡನೆ ಬೆಳೆಸಿಕೊಳ್ಳುವ ಜೈವಿಕ ಸಂಭಂಧಗಳು ತನ್ನ ಜೈವಿಕ ಸಂಬಂಧಿಯು ಜೀವಿಸಿರುವವರೆಗೆ ಮಾತ್ರವೇ ಅಥವಾ ಅನಂತರವೂ ಮುಂದುವರೆಯುತ್ತವೆಯೇ? ಹಾಗೆ ಮುಂದುವರೆದರೆ ಅದು ಯಾವ ರೀತಿಯಲ್ಲಿ? ಜೈವಿಕ ಸಂಬಂಧಿಯು ಪಂಚಭೂತಗಳಲ್ಲಿ ವಿಲೀನವಾದ ನಂತರ ಯಾವ ವಿಧದಲ್ಲಿ ಸಂಬಂಧವು ಮುಂದುವರೆಯುತ್ತದೆ ಹಾಗೂ ಎಲ್ಲಿಯವರೆಗೆ?
ಇದೇ ಪ್ರಶ್ನೆಯು ಭಾವನಾತ್ಮಕ ಸಂಬಂಧಗಳಾದ ಪತಿ, ಪತ್ನಿ ವಿಚಾರದಲ್ಲೂ ಉತ್ಪತ್ತಿಯಾಗಬಹುದಲ್ಲವೇ? ನಿಮಗೆ ಗೊತ್ತಿರುವ ವಿಶ್ಲೇಷಣೆಗಳನ್ನು ಹಂಚಿಕೊಳ್ಳಿ.  





ಲಕ್ಷ್ಮಿಯ ಸಂಗಾತಿ ಗೂಬೆ!


ಲಕ್ಷ್ಮಿಯ ಸಂಗಾತಿ ಗೂಬೆ!

ನಮ್ಮ ದೇಶದ ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಲಕ್ಷ್ಮಿಯ ಚಿತ್ರಗಳಲ್ಲಿ ಶ್ವೇತ ವರ್ಣದ ಗೂಬೆಯನ್ನೂ ಕಾಣಬಹುದು. ಅಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ಬಿಳಿ ಬಣ್ಣದ ಗೂಬೆಯನ್ನು ಪಾವಿತ್ರ್ಯತೆಗೆ ಹೋಲಿಸಿ ಅದು ದೇವಿಯೊಂದಿಗೆ ಇರುವುದರಿಂದ, ಶುಭ ಸೂಚಕವೆಂದು ಭಾವಿಸುವರು. ಈ ಗೂಬೆ ಯಾರು? ಇದರ ಬಗ್ಗೆ ಎಲ್ಲೂ ವಿವರಗಳು ಕಂಡುಬರುವುದಿಲ್ಲ.

ಕೆಲವರು, ಲಕ್ಷ್ಮಿಯು ಗೂಬೆಯ ಮೇಲೆ ಪಯಣಿಸುತ್ತಾಳೆ ಎಂದರೆ; ಮತ್ತೆ ಕೆಲವರು, ಲಕ್ಷ್ಮಿಯು ಆನೆಯ ಮೇಲೆ ಕುಳಿತು ಪ್ರಯಾಣಮಾಡುತ್ತಿರುವಾಗ ಗೂಬೆಯು ಅವಳನ್ನು ಅನುಸರಿಸುತ್ತದೆ ಎನ್ನುವರು. ಆನೆಯು ಶಕ್ತಿ, ಸಂಪತ್ತು ಹಾಗೂ ಗಾಂಭೀರ್ಯತೆಯೊಂದಿಗೆ ಇರುವುದರಿಂದ ಅದು ಲಕ್ಷ್ಮಿಗೆ ವಾಹನವಾಗುವುದು ಸೂಕ್ತವೆನಿಸುತ್ತದೆ.

ಗೂಬೆಗಳು ಸದಾ ಒಂಟಿ ಪ್ರಾಣಿ, ಹಗಲು ಹೊತ್ತಿನಲ್ಲಿ ನಿದ್ರಿಸಿ ರಾತ್ರೆಯೆಲ್ಲಾ ಎದ್ದಿದ್ದು ಆಹಾರವನ್ನು ಹುಡುಕುವುದು. ಅದರ ರಾತ್ರೆಯಲ್ಲಿನ ಚಟುವಟಿಕೆ ಹಾಗೂ ಕೆಟ್ಟದಾಗಿ ಕೂಗುವುದರಿಂದ ಅದನ್ನು ದುರಾದೃಷ್ಟ ಮತ್ತು ಸಾವಿಗೆ ಹೋಲಿಸಿ ಹಾಗೂ ಅದರಿಂದಾಗಿ ಗೂಬೆಯು ಲಕ್ಷ್ಮಿಯ ಅವಳಿ ಹಿರಿಯ ಸಹೋದರಿ ಅಲಕ್ಷ್ಮಿಯೆಂದು ಎಲ್ಲರೂ ಭಾವಿಸುವರು. ಅಲಕ್ಷ್ಮಿಯು ದುಃಖ ಹಾಗೂ ದುರಾದೃಷ್ಟಗಳ ದೇವತೆಯೆನ್ನುವರು. ಆದರೆ ಇದೇ ಗೂಬೆಯ ಕಣ್ಣುಗಳು ದುಂಡಗಿದ್ದು ಅದು ಅತ್ತಿತ್ತ ಚಲಿಸದೇ ನೇರವಾಗಿ ದುರುಗುಟ್ಟಿಕೊಂಡು ನೋಡುವುದರಿಂದ ಗೂಬೆಯನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಪುರಾತನ ಗ್ರೀಸ್ ದೇಶದಲ್ಲಿ ಬುದ್ಧಿವಂತಿಕೆಗೆ ಹೋಲಿಸುವರು. ಗ್ರೀಸ್ ದೇಶದಲ್ಲಿ ಗೂಬೆಯನ್ನು ಬುದ್ಧಿಯ ದೇವತೆಯಾದ ಅಥೆನ ಎಂದು ಪರಿಗಣಿಸುವರು. “ದುಂಡು ಕಣ್ಣುಗಳುಎಂಬ ಪದವನ್ನು ಪೂರ್ವ ಭಾರತದಲ್ಲಿ ಜಗನ್ನಾಥನಿಗೆ ಹೋಲಿಸಿ, ಜಗನ್ನಾಥ ದೈವವನ್ನುಗುಂಡು ಕಣ್ಣಿನ ದೈವಎಂದು ಕರೆಯುವರು. ಇದರಿಂದಾಗಿ ಇಲ್ಲಿನ ಜನರು ಗೂಬೆಯು ಲಕ್ಷ್ಮಿಯ ಪತಿಯಾದ ವಿಷ್ಣುವನ್ನು ಪ್ರತಿನಿಧಿಸುವುದೆಂದೂ ಊಹಿಸುತ್ತಾರೆ. ಈ ಆಲೋಚನೆಯನ್ನು ಬೆಂಬಲಿಸುವಂತೆ ಹಿಂದೂ ಪುರಾಣಗಳಲ್ಲಿ ದೇವತೆಗಳ ವಾಹನವು ಯಾವಾಗಲೂ ಪುಲ್ಲಿಂಗವಾಗಿರುವುದು, ಸ್ತ್ರೀಲಿಂಗವಲ್ಲ. ಆದರೆ ಲಕ್ಷ್ಮಿಯು ತನ್ನ ಪತಿಯನ್ನೇ ವಾಹನವನ್ನಾಗಿಸಿಕೊಂಡು ಪ್ರಯಾಣಿಸುವುದೆಂಬ ಅಲೋಚನೆಯು ಸ್ತ್ರೀವಾದಿಗಳಿಗೆ ಹಾಗೂ ಸಂಪ್ರದಾಯವಾದಿಗಳಿಗೆ ಒಪ್ಪಿಗೆಯಾಗುವುದಿಲ್ಲ. ಅವರುಗಳು ಗೂಬೆಯು ಲಕ್ಷ್ಮಿಯ ಜೊತೆ ಇರುತ್ತದೆ ಅಷ್ಟೇ ಹೊರತು ಅವಳು ಅದರ ಮೇಲೆ ಸವಾರಿ ಮಾಡುವುದಿಲ್ಲ ಎಂಬುದಾಗಿ ಆಗ್ರಹಿಸುತ್ತಾರೆ. ಲಕ್ಷ್ಮಿಯು ಗೂಬೆಯ ಮೇಲೆ ಸವಾರಿ ಮಾಡದೇ ಇದ್ದಲ್ಲಿ ಅದು ಇಲ್ಲವೇ ವಿಷ್ಣುವಿರಬೇಕು ಅಥವಾ ಅವಳ ಅವಳಿ ಸಹೋದರಿ(ಹಿರಿಯ), ಅಲಕ್ಷ್ಮಿ ಇರಬೇಕು.

ಆದರೆ ವಿಷ್ಣುವು ಲಕ್ಷ್ಮಿಯನ್ನು ಹಿಂಬಾಲಿಸುವುದಿಲ್ಲ; ಬದಲಾಗಿ ಅವಳೇ ವಿಷ್ಣುವನ್ನು ಹಿಂಬಾಲಿಸುವಳು ಹಾಗೂ ವಿಷ್ಣುವು ಸದಾ ಎಲ್ಲೇ ಹೋಗಲಿ ಅವನ ಉದ್ದೇಶವು ಧರ್ಮವನ್ನು ಎತ್ತಿಹಿಡಿಯುವುದೇ ಆಗಿರುತ್ತದೆ. ಅಲಕ್ಷ್ಮಿಯು ಹಿರಿಯ ಸಹೋದರಿಯಾದ್ದರಿಂದ ಸದಾ ಲಕ್ಷ್ಮಿಯ ಜೊತೆಯಲ್ಲೇ ಇರುವಳು. ಕೆಲವೆಡೆ ಚಿತ್ರಪಟಗಳಲ್ಲಿ ಲಕ್ಷ್ಮಿಯು ವಿಷ್ಣು ಮತ್ತು ಗೂಬೆ ಇಬ್ಬರೊಂದಿಗೂ ಇರುವುದನ್ನು ಗಮನಿಸಬಹುದು. ಕಲೆಗೆ ಸಂಬಂಧಿಸಿದ ಚರಿತ್ರಕಾರರ ಅಭಿಪ್ರಾಯದ ಪ್ರಕಾರ ಅಲಕ್ಷ್ಮಿಯನ್ನು ಲಕ್ಷ್ಮಿಯೊಂದಿಗೆ ಚಿತ್ರಿಸುವುದು ಅಶುಭಸೂಚಕವಾದದ್ದರಿಂದ ಅವಳನ್ನು ಗೂಬೆಯನ್ನಾಗಿ ಚಿತ್ರಿಸುವರು. ಆದರೆ ಅವಳನ್ನು ಏಕೆ ಚಿತ್ರಿಸಬೇಕು?

ಲಕ್ಷ್ಮಿಗೆ ಒಬ್ಬಳು ಹಿರಿಯ ಅವಳಿ ಸಹೋದರಿ ಇರುವಳೆಂಬ ಕಲ್ಪನೆಯು ಪುರಾತನವಾದದ್ದು. ಕೆಲವರು ಲಕ್ಷ್ಮಿಯು ಬ್ರಹ್ಮನ ಮುಖದಿಂದ ಜನಿಸಿದರೆ ಅಲಕ್ಷ್ಮಿಯು ಅವನ ಹಿಂಭಾಗದಿಂದ ಹುಟ್ಟಿದಳೆಂದು ಹೇಳುತ್ತಾರೆ. ಮತ್ತೆ ಕೆಲವರು ಲಕ್ಷ್ಮಿಯು ಸಮುದ್ರ ಮಥನದ ಸಮಯದಲ್ಲಿ ಅಮೃತದೊಂದಿಗೆ ಹೊರಬಂದಳೆಂದೂ ಹಾಗೂ ಅಲಕ್ಷ್ಮಿಯು ಹಾಲಾಹಲದೊಂದಿಗೆ ಬಂದಳೆಂದು ಹೇಳುವರು. ಅಲಕ್ಷ್ಮಿಯನ್ನು ದರಿದ್ರ, ಬಡತನವೇ ಮೂರ್ತಿವೆತ್ತವಳು, ಕಲಹವನ್ನು ಸೃಷ್ಟಿಸುವವಳು ಎಂಬುದಾಗಿ ಗುರುತಿಸಲಾಗುವುದು. ಶಿವಪುರಾಣದಲ್ಲಿ ಅಲಕ್ಷ್ಮಿಯನ್ನು ಶಕ್ತಿಯ ಭಯಾನಕ ರೂಪವಾದ ಕಾಳಿಯನ್ನಾಗಿ ವರ್ಣಿಸಿದರೆ, ಲಕ್ಷ್ಮಿಯನ್ನು ಶಕ್ತಿಯ ಪ್ರೀತಿಯ ರೂಪವಾದ ಗೌರಿಯನ್ನಾಗಿ ಚಿತ್ರಿಸಲಾಗಿದೆ. ವಿಷ್ಣು ಪುರಾಣದಲ್ಲಿ ಲಕ್ಷ್ಮಿಯು ಧರ್ಮವನ್ನು ಪ್ರತಿನಿಧಿಸಿದರೆ, ಅಲಕ್ಷ್ಮಿಯನ್ನು ಅಧರ್ಮವನ್ನಾಗಿ ಪರಿಗಣಿಸಲಾಗಿದೆ. ಹೀಗೆ ಲಕ್ಷ್ಮಿ ಹಾಗೂ ಅಲಕ್ಷ್ಮಿಯರು ಒಂದು ಗೋಲದ ಎರಡು ಹೋಳುಗಳು. ಲಕ್ಷ್ಮಿಯು ಇಷ್ಟಪಡುವ ಹಣ್ಣಾದರೆ, ಅಲಕ್ಷ್ಮಿಯು ತಿರಸ್ಕರಿಸುವ ತ್ಯಾಜ್ಯವಸ್ತು. ಎರಡೂ ಒಂದನ್ನೊಂದು ಬಿಟ್ಟಿರದೆ ಒಂದೆಡೆಯೇ ಇರುವುದು.

ಪುರಾಣದಲ್ಲಿ ಲಕ್ಷ್ಮಿಯು ವ್ಯಕ್ತಿನಿಷ್ಠ ನಿರ್ಣಯವನ್ನು ಮಾಡುವುದಿಲ್ಲ. ಒಂದು ಪಾತ್ರೆಯಲ್ಲಿನ ಅನ್ನವು ಸಂತನಿಗೂ ಮತ್ತು ಪಾಪಾತ್ಮನಿಗೂ ಒಂದೇ ಪರಿಣಾಮವನ್ನು ಉಂಟುಮಾಡುತ್ತದೆ. ಒಂದು ರೂಪಾಯಿಯು ನ್ಯಾಯಾಧೀಶನಲ್ಲೂ ಹಾಗೂ ಕೊಲೆಗಾರನಲ್ಲೂ ಒಂದೇ ಬೆಲೆಯಿರುವುದು. ಆದರೆ ಲಕ್ಷ್ಮಿಯು ಸದಾ ತನ್ನ ಸಹೋದರಿಯೊಂದಿಗೇ ಬರುತ್ತಾಳೆ. ಅಲಕ್ಷ್ಮಿಯನ್ನು ಗುರುತಿಸದೇ ಇದ್ದಲ್ಲಿ ಅದು ಅಪಾಯಕಾರಿ, ಏಕೆಂದರೆ ಸಂಪತ್ತಿನೊಂದಿಗಿನ ಎಲ್ಲ ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಣವು ತನ್ನೊಂದಿಗೇ ದುಃಖ ಹಾಗೂ ಅಸೂಯೆಗಳನ್ನು ತರುವುದೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅಲಕ್ಷ್ಮಿಯು ಈ ಗುಣಗಳನ್ನೇ ಪ್ರತಿನಿಧಿಸುವಳು. ಶ್ರೀಮಂತ ಸಹೋದರರ ನಡುವಿನ ಜಗಳಗಳಲ್ಲಿ ಅವಳೇ ಇರುವುದು. ಮನೆಯನ್ನು ಒಡೆಯುವವಳೇ ಅವಳು. ಬಂಗಾರದಂತಹ ಮನೆಯಲ್ಲಿ ಶಾಂತಿಯು ಬರದೇ ಇರುವಂತೆ ನೋಡಿಕೊಳ್ಳುವವಳೇ ಅವಳು.

ಅಲಕ್ಷ್ಮಿಯನ್ನು ನಿರ್ವೀರ್ಯಳನ್ನಾಗಿ ಮಾಡುವ ಒಂದೇ ದಾರಿಯೆಂದರೆ ಸದಾ ಅವಳ ಬಗೆಗಿನ ಅರಿವು: ಹಾಗೂ ಲಕ್ಷ್ಮಿಯ ಇರುವಿಕೆಯನ್ನು ಹೇಗೆ ಗುರುತಿಸುವೆವೋ ಅದೇ ರೀತಿ ಅವಳ ಇರುವಿಕೆಯನ್ನೂ ಸದಾ ಗುರುತಿಸುವುದು. ಧಾರ್ಮಿಕ ಕ್ರಿಯೆಗಳಲ್ಲಿ ಹಣ್ಣು ಹಂಪಲುಗಳು ಹಾಗೂ ಸಿಹಿಪದಾರ್ಥಗಳನ್ನು ಮನೆಯೊಳಗೆ ಇರಿಸಿ, ಅದನ್ನು ಲಕ್ಷ್ಮಿಗೆ ಅರ್ಪಿಸಿದರೆ, ಅಲಕ್ಷ್ಮಿಗೆ ನಿಂಬೆಹಣ್ಣು, ಮೆಣಸಿನಕಾಯಿಗಳನ್ನು ಮನೆಯ ಹೊರಗೆ ಇರಿಸಿ ಅರ್ಪಿಸಲಾಗುವುದು. ಧರ್ಮಗ್ರಂಥಗಳ ಪ್ರಕಾರ ಲಕ್ಷ್ಮಿಯು ತನ್ನ ಸಹೋದರಿಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಸಂಪತ್ತು ಎಲ್ಲಿಗೂ ದುಃಖವನ್ನು ಬಿಟ್ಟು ಒಂಟಿಯಾಗಿ ಹೋಗುವುದಿಲ್ಲ.

ಒಂದು ಕಥೆಯು ಹೀಗಿದೆ :- ಒಬ್ಬ ವ್ಯಾಪಾರಿಯ ಮನೆಗೆ ಲಕ್ಷ್ಮಿ ಹಾಗೂ ಅಲಕ್ಷ್ಮಿಯರಿಬ್ಬರೂ ಭೇಟಿಕೊಟ್ಟು ತಮ್ಮಿಬ್ಬರಲ್ಲಿ ಯಾರು ಅತಿ ಸುಂದರಿಯರು ಎಂದು ಅವನನ್ನು ಕೇಳಿದರು. ಯಾರೊಬ್ಬರನ್ನೂ ಅತೃಪ್ತಿ ಪಡಿಸಲಾಗದೇ ಭಯಭೀತನಾದ ವ್ಯಾಪಾರಿಯು ಇಬ್ಬರನ್ನೂ ಸಂತೋಷಪಡಿಸುವ ರೀತಿಯಲ್ಲಿ ಜಾಣತನದಿಂದ ಈ ರೀತಿ ಉತ್ತರಿಸಿದ - “ಲಕ್ಷ್ಮಿಯು ನನ್ನೆಡೆಗೆ ಬರುವಾಗ ಸುಂದರಿಯು. ಅಲಕ್ಷ್ಮಿಯು ನನ್ನಿಂದ ದೂರಹೋಗುವಾಗ ಸುಂದರಿ.” ಈ ರೀತಿಯ ಉತ್ತರದಿಂದ ಇಬ್ಬರೂ ಸಂತುಷ್ಟರಾಗಿ, ಅದೃಷ್ಟವು ವ್ಯಾಪಾರಿಯೆಡೆಗೆ ಬಂದಿತು ಹಾಗೂ ದುರಾದೃಷ್ಟವು ಅವನಿಂದ ದೂರಾಯಿತು.

ಈಗಾದರೋ, ನಾವುಗಳು ದುಃಖ ಹಾಗೂ ದುರಾದೃಷ್ಟಗಳನ್ನು ನಮ್ಮ ಮನೆಯೊಳಗೆ ಆಮಂತ್ರಿಸುತ್ತೇವೆ. ಟೀವಿ ಮಾಧ್ಯಮಗಳು ದುಃಖ, ಹಿಂಸಾಚಾರ, ಅತ್ಯಾಚಾರಗಳನ್ನು ವೈಭವಿಕರಿಸುತ್ತವೆ. ಟೆಲಿವಿಷನ್ನಿನ ಎಲ್ಲ ಧಾರಾವಾಹಿಗಳೂ ಹಿಂಸೆ ಹಾಗೂ ದುಃಖಾಧಾರಿತ ವಿಷಯಗಳಿಂದ ಕೂಡಿರುವುದು. ಎಲ್ಲೆಲ್ಲೂ ಎಲ್ಲರೂ ಹೊಡೆದಾಟ ಬಡಿದಾಟಗಳಲ್ಲಿ ತಲ್ಲೀನರಾಗಿರುವರು. ಯುವಕರು ರಿಯಾಲಿಟಿ ಶೋಗಳಲ್ಲಿ ಹೊಡೆದಾಡುತ್ತಿದ್ದರೆ, ವೀಕ್ಷಕರು ಅದನ್ನು ಪ್ರೀತಿಸುವರು. ನ್ಯಾಯಾಧೀಶರು ಹೊಡೆದಾಡಿಕೊಳ್ಳುತ್ತಿರುವರು, ಸಂಗೀತಗಾರರೂ ಹೊಡೆದಾಡಿಕೊಳ್ಳುತ್ತಿರುವರು, ನಾವುಗಳು ಮನೆಯಲ್ಲಿ ಪರಸ್ಪರ ಸಂತೋಷದ ಸಮಯವನ್ನು ಕಳೆಯುವುದನ್ನು ಬಿಟ್ಟು ಈ ರೀತಿಯ ಅಶಾಂತಿಯ ಕಾರ್ಯಕ್ರಮಗಳನ್ನು ರಾತ್ರೆ ಊಟಮಾಡುವ ಸಮಯದಲ್ಲಿ ನೋಡುತ್ತಾ ನಮ್ಮಲ್ಲಿನ ಶಾಂತಿಯನ್ನು ಹೊಡೆದೋಡಿಸುತ್ತಿರುವೆವು. ಯುದ್ಧವನ್ನು ಮನರಂಜನೆಯನ್ನಾಗಿ ಪ್ರಸ್ತುತ ಪಡಿಸುತ್ತೇವೆ. ಅತ್ಯಾಚಾರ, ಅನಾಚಾರ ಮತ್ತು ಕೊಲೆ, ಸುಲಿಗೆಗಳಿಂದ ಕೂಡಿದ ಪ್ರದರ್ಶನಗಳು ನಮ್ಮಲ್ಲಿನ ವಿಕೃತಕಾಮನೆಗಳನ್ನು ವೃದ್ಧಿಸುತ್ತವೆ. ಇವೆಲ್ಲವೂ ನಡೆಯುತ್ತಿರುವುದು ನಮ್ಮ ಭಾರತದೇಶವು ಸ್ವಾತಂತ್ರ್ಯ ಹಾಗೂ ಉದಾರೀಕರಣದ ಫಲವನ್ನು ಅನುಭವಿಸುತ್ತಿರುವ ಸಮಯದಲ್ಲಿ! ಉಹೆಮಾಡಿ, ಲಕ್ಷ್ಮಿಯನ್ನು ಬೆನ್ನಟ್ಟುವ ಭರದಲ್ಲಿ ನಾವುಗಳು ಅಲಕ್ಷ್ಮಿಯನ್ನು ಅತ್ಯಂತ ಪ್ರೀತಿ ಹಾಗೂ ಗೌರವಗಳಿಂದ, “ಹೊರಹೋಗು!” ಎನ್ನುವುದನ್ನು ಮರೆತಿದ್ದೇವೆ ಅಲ್ಲವೇ?




ರಾಮಾಯಣದ ಸೀತೆಯು ವನವಾಸಾದಲ್ಲೂ ಏಕೆ ಸಂತೋಷವಾಗಿದ್ದಳು


ರಾಮಾಯಣದ ಸೀತೆಯು ವನವಾಸಾದಲ್ಲೂ ಏಕೆ ಸಂತೋಷವಾಗಿದ್ದಳು

ಆಧುನಿಕ ರಂಗಭೂಮಿಗಾಗಿ ಪೌರಾಣಿಕ ಪಾತ್ರಗಳಾದ ದ್ರೌಪದಿಯಿಂದ ಅಹಲ್ಯೆ ಮತ್ತು ರಾಮನಿಂದ ರಾವಣನ ವರೆಗೆ ಪಾತ್ರಗಳನ್ನು ನೈಜ ದೃಷ್ಟಿಯಿಂದ ವ್ಯಾಖ್ಯಾನಿಸಲಾಗಿದೆ.

ಶ್ರೇಷ್ಠ ತತ್ತ್ವಜ್ಞಾನಿ ತಂದೆಗೆ  ಸಾಹಿತ್ಯ ಹಾಗೂ ಆಧ್ಯಾತ್ಮಿಕಗಳಲ್ಲಿ ಪರಿಣತಿ ಪಡೆದ ಮಗಳು ವಿವಾಹಾನಂತರ ರಾಜಕಾರಣ ಹಾಗೂ ಒಳಸಂಚಿನಲ್ಲೇ ಬಹುಕಾಲ ಸಮಯವನ್ನು ಕಳೆದ ಮನೆಯೊಂದನ್ನು ಪ್ರವೇಶಿಸಿದರೆ ಹೇಗನಿಸುತ್ತದೆ?

ಇಂತಹ ಸಂದರ್ಭದಲ್ಲಿ ಸ್ವತಂತ್ರ ಜೀವಿಯಾದ ಈ ವಧುವಿಗೆ ಒಮ್ಮೆಲೇ 14 ವರ್ಷ ಕಾಡಿಗೆ ಹೋಗುವ ಸಂದರ್ಭ ಬಂದರೆ ಹೇಗಿರುತ್ತದೆ?

ಅವಳೇ ವಿಧೇಯ ಪತ್ನಿ, ಅಸಹಾಯಕ ಬಂಧಿ ಮತ್ತು ಎರಡು ಮಕ್ಕಳ ಪರಿತ್ಯಕ್ತ ಮಾತೆ ಸೀತೆ. 

ಈಕೆ ಮಿಥಿಲಾ ನಗರದಿಂದ ವಾಲ್ಮೀಕಿಯ ಆಶ್ರಮದವರೆಗೂ ಸ್ವಯಂ ಹುಡುಕಾಟದ ಪ್ರಯಾಣವನ್ನು ಸ್ವಯಿಚ್ಛೆಯಿಂದ ಮಾಡಿದಾಕೆ. ಆ ಸಮಯದಲ್ಲಿ ಅಯೋಧ್ಯಾ ನಗರವು ಗುಂಪುಗಾರಿಕೆ, ಗೃಹಸಂಬಂಧೀ ರಾಜಕೀಯದ ಕತ್ತಲಿನಲ್ಲಿ ಆವರಿಸಿತ್ತು. ಕೆಲವರಿಗೆ ರಾಮ, ಲಕ್ಷ್ಮಣ ಹಾಗೂ ಸೀತೆ ಅಯೋಧ್ಯಾನಗರವನ್ನು ತ್ಯಜಿಸುವುದು ದುಃಖಕರವಾದ ಸಂಗತಿಯಾದರೆ, ಸೀತೆಗೆ ಇದು ಸಂತೋಷದ ಸಂಗತಿಯಾಗಿತ್ತು ಎನ್ನುತ್ತಾರೆ ವೀಣಾಪಾಣಿ ಚಾವಲ ರವರು ತಮ್ಮ Voyages of Body & Soul ಪುಸ್ತಕದಲ್ಲಿನ  “The Places and Spaces Inhabited by Sita” ಪ್ರಬಂಧದಲ್ಲಿ.  ಒಂದು ರೀತಿಯಲ್ಲಿ ಸೀತೆಗೆ ಋಷಿ ಮುನಿಗಳು ವಾಸಿಸುತ್ತಿದ್ದ ಅರಣ್ಯವು ಪರ್ಯಾಯ ತಿಳುವಳಿಕೆಯ ಕ್ಷೇತ್ರವಾಗಿತ್ತು.  ಅರಣ್ಯವು ಸೀತೆಗೆ ಅಯೋಧ್ಯೆಗಿಂತ ಹೆಚ್ಚಿನ ಘಟನೆಗಳು ಘಟಿಸಿದ ಸ್ಥಳವೆಂದೇ ಹೇಳಬಹುದು.

ಮತ್ತೊಂದು ಪೌರಾಣಿಕ ಪಾತ್ರವಾದ ಅತ್ಯಂತ ವಿಧೇಯ ಪತ್ನಿಯಾದ ಗಾಂಧಾರಿಯ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಐರಾವತಿ ಕರ್ವೆ ಯವರ ಮಹಾಭಾರತವನ್ನು ಅಸಾಧಾರಣವಾಗಿ ತಮ್ಮಯುಗಂತಕೃತಿಯಲ್ಲಿ ಅರ್ಥೈಸಿದಂತೆ ಗಾಂಧಾರಿಯ ಕುರುಡುತನವು ಸಂದರ್ಭಕ್ಕೆ ಶರಣಾಗಿದ್ದ ಸಂಕೇತವಲ್ಲ ಬದಲಿಗೆ ಅದು ಬಂಡಾಯದ ಸಂಕೇತವಷ್ಟೇ. ಐರಾವತಿ ಕರ್ವೆಯವರಯುಗಾಂತಕೃತಿಯಿಂದ ಪ್ರಭಾವಿತರಾದ ಶ್ರೀ.ವಾಘ್ ರವರು ಅರ್ಥೈಸಿದಂತೆ ಗಾಂಧಾರಿಯು ಜನಪ್ರಿಯ ಕಲ್ಮನೆಯಂತೆ ಪತಿವ್ರತೆಯಲ್ಲ. ಬದಲಿಗೆ ಅವಳು ತನಗೆ ಬೇಕಾದದ್ದನ್ನು ವೀಕ್ಷಿಸುತ್ತಿದ್ದಳು ಹಾಗೂ ನಾವು ಈಗ ಹೇಗೆ ಚರಿತ್ರೆಯನ್ನು ನಮಗೆ  ಅನುಕೂಲವಾಗುವಂತೆ ಶೋಧಿಸುತ್ತೇವೆಯೋ ಹಾಗೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ಮೂಲಕ ತನ್ನ ಪ್ರಭಾವವನ್ನು ಬೇರೆಯವರ ಮೇಲೆ ಬೀರುತ್ತಿದ್ದಳು.

ಈಗಿನ ಭಾರತೀಯ ನಾಟ್ಯ ಹಾಗೂ ರಂಗಭೂಮಿಯಲ್ಲಿ ಹಿಂದುಗಳ ದೇವಾನುದೇವತೆಗಳ, ರಾಕ್ಷಸರ ಪಾತ್ರಗಳನ್ನು ವ್ಯಾಪಕವಾಗಿ ಪುನರಚಿಸಲಾಗುತ್ತಿದೆ.  ನಮ್ಮ ಸುತ್ತ ಮುತ್ತಲಿನ ಪ್ರಪಂಚವು ಬದಲಾಗುತ್ತಿದ್ದಂತೆ ಯಾರು ಯಾವುದೇ ವಿಧವಾದ ಪ್ರತಿಗಾಮೀ ಹಾಗೂ ಗೌಣ ನಂಬಿಕೆಗಳನ್ನು ಹೊಂದಿದ್ದರೂ ಕಲೋಪಾಸಕರ ಹೇಳಿಕೆಯಂತೆ ಪುರಾಣಗಳು ಇರುವುದೇ ಅದನ್ನು ಪುನರ್ವ್ಯಾಖ್ಯಾನಿಸಲು ಹಾಗೂ ಕಾಲ ಕಾಲಕ್ಕೆ ಪುನರ್ಚಿತ್ರಿಸಲು. 

ಪುರಾಣ ಕಾವ್ಯಗಳು ಪಿಂಗಾಣಿ ಪದಾರ್ಥಗಳನ್ನು ಮುಟ್ಟಿದರೆ ಒಡೆದು ಹೋಗುವಷ್ಟು ದುರ್ಬಲವಾದದ್ದಲ್ಲ ಎನ್ನುತ್ತಾರೆ ಹೆಸರಾಂತ ನೃತ್ಯಗಾತಿ ಶ್ರೀಮತಿ ಅನಿತಾ ರತ್ನ. ಇವರ ಸುಧಾರಣಾವಾದಿ ಕೃತಿಯಾದ “Million Sitas” ದಲ್ಲಿ ರಾಮಾಯಣದಲ್ಲಿ ಬರುವ ಅನೇಕ ಸ್ತ್ರೀ ಪಾತ್ರಗಳನ್ನು ಅನೇಕ ಮೌಖಿಕ ಸಂಪ್ರದಾಯಗಳ ಬೂದುಗನ್ನಡಿಯ ಮೂಲಕ ವಿಮರ್ಶಿಸಿದ್ದಾರೆ.  ಅವರ ಪ್ರಕಾರ ಪುರಾಣದ ಗ್ರಂಥಗಳನ್ನು ಓದಿದಾಗ ನಮಗೆ ಅನಿಸುವುದು ರಾಮಾಯಣದ ಮಂಥರೆಯು ಅಸಾಮಾನ್ಯ ರಾಜಕೀಯ ವಿಮರ್ಶಕಳು ಹಾಗೂ ಸಂಧಾನಕಾರಿಣಿ. ಹಾಗೆಯೇ ಶೂರ್ಪಣಖಿಯು ಆಧುನಿಕ ಕಾಲದ ಸ್ತ್ರೀ-ಪುರುಷ ಸಂಬಂಧಗಳ ಬಗ್ಗೆ ಗಾಢವಾದ ಭರವಸೆಯುಳ್ಳ ಮಹಿಳೆ ಮತ್ತು ಅಹಲ್ಯೆಯು ವಿಜಯದ ಸಂಕೇತವನ್ನು ಪ್ರತಿನಿಧಿಸುವ ಪತ್ನಿ.  ತಮ್ಮ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ ಸಂದರ್ಭಗಳನ್ನು ಮುನ್ನಡೆಸಿಕೊಂಡು ಹೋದರಲ್ಲದೇ ಅನೇಕ ಗಂಭೀರವಾದ ಸಂದರ್ಭಗಳನ್ನು ಪುರುಷ ಪಾತ್ರಧಾರಿಗಳು ನಿಭಾಯಿಸಲು ಸಾಧ್ಯವಾಗದೇ ಇದ್ದರೂ ಸ್ತ್ರೀ ಪಾತ್ರಧಾರಿಗಳು ಯಶಸ್ವಿಯಾಗಿ ನಿಭಾಯಿಸಿದರು.    

ಕನ್ನಡ ರಂಗಭೂಮಿಯ ಹೆಸರಾಂತ ನಿರ್ದೇಶಕ ಮಂಜುನಾಥ್ ಬಡಿಗೇರರು ತಮ್ಮ ಚಿತ್ರಪಠ ನಾಟಕದಲ್ಲಿ ಸೀತಾ-ರಾಮ-ರಾವಣರ ತ್ರಿಕೋನ ಪಾತ್ರಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ - ರಾಮ ರಾವಣರ ಯುದ್ಧದ ನಂತರ ಒಂದು ಸುಂದರ ಸಂಜೆ ಅಯೋಧ್ಯೆಯಲ್ಲಿ ರಾಮ - ಸೀತೆಯರು ಆನಂದದಿಂದಿರುವಾಗ ಶೂರ್ಪಣಕೆಯು ತನ್ನ ಸೋದರನ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಅಲ್ಲಿಗೆ ಬರುವಳು. ಅವಳು ಸೀತೆಗೆ ತಾನು ಲಂಕೆಯಲ್ಲಿ ಬಂಧನದಲ್ಲಿದ್ದಾಗ ಕಂಡ ರಾವಣನ ವರ್ಣ ಚಿತ್ರವನ್ನು ಬಿಡಿಸಲು ಕೋರಿಕೊಳ್ಳುತ್ತಾಳೆ. ಸೀತೆಯು ವರ್ಣಚಿತ್ರವನ್ನು ಬಿಡಿಸಿದ ಕೊಡಲೇ  ಶೂರ್ಪನಖೆಯ ಮಾಯೆಯ ಪ್ರಭಾವದಿಂದ ಚಿತ್ರಕ್ಕೆ  ಜೀವ ತುಂಬುತ್ತಾಳೆ. ಅದೇ ಸಮಯಕ್ಕೆ ರಾಮನು ಅಲ್ಲಿಗೆ ಬಂದು ಅದನ್ನು ನೋಡಿ  ಕೋಪೋದ್ರಿಕ್ತನಾಗುತ್ತಾನೆ.  ಆ ಸ್ಥಿತಿಯಲ್ಲಿ ರಾಮನು ಆದರ್ಶ ಪುರುಷನಾಗಿರುವುದಿಲ್ಲ, ಬದಲಾಗಿ ಅವನು ಕೋಪದಿಂದ ಕೂಡಿದ, ಮಾತ್ಸರ್ಯಕ್ಕೊಳಗಾಗಿರುವ ಹಾಗೂ ಯಾವುದೇ ಸಮರ್ಥನೆಗೆ ಕಿವಿಗೊಡದ ಪತಿಯಾಗಿರುತ್ತಾನೆ. ಆ ಸಂದರ್ಭದಲ್ಲಿ ರಾಮನು ರಾವಣನ ಮೇಲೆ ಆಕ್ರಮಣಮಾಡಿ ಅವನನ್ನು ಘಾಸಿಗೊಳಿಸುತ್ತಾನೆ.

ಇಲ್ಲಿಂದ ಮುಂದುವರೆದ ಬಡಿಗೇರರು ಈ ಘಟನೆಗೆ ಹೊಸದೇ ಆದ ತಿರುವನ್ನು ನೀಡುತ್ತಾರೆ - ಈ ಘಟನೆಯಿಂದ ಸೀತೆಯು ನಿರಾಶೆ ಮತ್ತು ದುಃಖದಿಂದ ಕುಸಿದು ಬೀಳುವುದರ ಬದಲಾಗಿ ಗಾಯಗೊಂಡ ಜೀವಿಯನ್ನು ಮೆಲ್ಲಗೆ ಎತ್ತಿಕೊಂಡು ಅದನ್ನು ತಾನೇ ಚಿತ್ರದ ಮೂಲಕ ಜನ್ಮ ನೀಡಿದ್ದರಿಂದ ಅದು ತನ್ನ ಮಗುವೆಂದು ತಿಳಿಸಿ ಒಬ್ಬಂಟಿಯಾಗಿ ತನ್ನ ಪತಿಯೊಡನೆ ವೀರಾವೇಶದಿಂದ ಹೋರಾಡುತ್ತಾಳೆ. ಬಡಿಗೇರರ ನಾಟಕದಲ್ಲಿ ಇದು ಒಂದು ಆಶ್ಚರ್ಯಕರವಾದ ಹಾಗೂ ಏಕೈಕ ತಿರುವು. ಅವರ ಪ್ರಕಾರ - ಈ ಕಥೆಯು ಅಸಹಾಯಕ ಹಾಗೂ ದುರ್ಬಲ ಹೆಣ್ಣಿನ ಕಥೆಯಾಗದೇ ಹೆಣ್ಣು ಆ ಸಂದರ್ಭದಲ್ಲಿ ಪ್ರತಿಭಟಿಸುವುದಲ್ಲದೇ ಆಕ್ರಮಣವನ್ನೂ ಮಾಡುವ ಸೀತೆಯಾಗುವಳು ಎಂಬುದೇ ಅವರ ಕಲ್ಪನೆ.

ಹೆಚ್ಚು ಹೆಚ್ಚು ಸೃಜನಾತ್ಮಕ ನಿರ್ದೇಶಕರುಗಳು ಹಳೆ ಪುರಾಣದ ಘಟನೆಗಳನ್ನು ಒಪ್ಪಿಕೊಳ್ಳದೇ ತಮ್ಮದೇ ಆದ ಕಲ್ಪನೆಗೆ ಆದ್ಯತೆ ಕೊಟ್ಟು ಹೊಸ ತಿರುವುಗಳನ್ನು ಸೃಷ್ಟಿಸುತ್ತಿರುವುದನ್ನು ನಾವು ಗಮನಿಸಬಹುದು.
ಮತ್ತೊಬ್ಬ ಸೃಜನಾತ್ಮಕ ನಿರ್ದೇಶಕ ಕೆ.ಎಸ್.ರಾಜೇಂದ್ರನ್ ರವರು ಪುರಾಣದ ಪಾತ್ರಗಳ ಅರ್ಥ ವಿವರಣೆಗಳನ್ನು ಯುವ ಪೀಳಿಗೆಯ ನಟರಿಗೆ  ಅದರಲ್ಲೂ ಮಹಿಳೆಯರಿಗೇ ಬಿಡುತ್ತೇನೆಂದು ತಿಳಿಸುತ್ತಾರೆ. ರಾಜೇಂದ್ರನ್ ರವರು ಕೆ.ಮದವನೆ ಯವರು ರಚಿಸಿರುವಮಾಹಾಭಾರತದ ಸ್ತ್ರೀಯರುಕೃತಿಯ ಆಧಾರಿತ ನಾಟಕದಲ್ಲಿ ಅಂಬಾ, ದ್ರೌಪದಿ, ಕುಂತಿ ಹಾಗೂ ಸತ್ಯವತಿಯರ ಜೀವನ ಚರಿತ್ರೆಯನ್ನು ತಮಿಳುನಾಡಿನ ಒಬ್ಬ ಯುವತಿಯ ಮರ್ಯಾದಾ ಕೊಲೆಗೆ ಜೋಡಿಸುತ್ತಾರೆ. ಈ ಪಾತ್ರಧಾರಿಗಳೆಲ್ಲರೂ ಸ್ತ್ರೀಯರ ಮೇಲಿನ ಪುರುಷರ ದಬ್ಬಾಳಿಕೆಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅದರಲ್ಲೂ  ದ್ರೌಪದಿಯು ಸಂದರ್ಭಕ್ಕೆ ಬಲಿಪಶುವಾಗದೇ ಯುದ್ಧಕ್ಕೆ ತನ್ನ ಪತಿಯರನ್ನು ಪ್ರೇರೇಪಿಸುತ್ತಾಳೆ ಹಾಗೂ ಆಕ್ರಮಣಕಾರಿ ಮನೋಭಾವನೆಯನ್ನು ಅನೇಕ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಾಳೆ. 

ಕನ್ನಡಾನುವಾದ - ಗುರುಪ್ರಸಾದ್ ಹಾಲ್ಕುರಿಕೆ
  
         

 


ಯಾತು - ಕ್ರಿಯೆ ಒಂದು ವಿಶ್ಲೇಷಣೆ


ಯಾತು - ಕ್ರಿಯೆ ಒಂದು ವಿಶ್ಲೇಷಣೆ

ಸಂಸ್ಕೃತದ ಯಾತು ಪದಕ್ಕೆ ಸಮಾನಾರ್ಥವೆಂದರೆ ಜಾದು, ಇಂದ್ರಜಾಲ. ವಸ್ತುಗಳು ಒಳಗೊಂಡಿರುವ ಸಾಮರ್ಥ್ಯವನ್ನು ಯಾತು-ಶಕ್ತಿ ಎಂದೆನ್ನುತ್ತಾರೆ. ಅದನ್ನು ತಿಳಿದುಕೊಳ್ಳುವುದೇ ಯಾತು - ವಿದ್ಯೆ. ಅದನ್ನು ಅರಿತವನನ್ನು ಯಾತುಧಾನ ಎಂದು ಕರೆಯುತ್ತಾರೆ. ಪುರಾಣಕಾಲದಲ್ಲಿ ರಾಕ್ಷಸರು ಈ ವಿದ್ಯೆಯನ್ನು ಅರಿತಿದ್ದರಿಂದಾಗಿ ಅವರನ್ನು ಯಾತುಧಾನರೆಂದು ಗುರುತಿಸಲಾಗುತ್ತಿತ್ತು. ಈ ಸಾಮರ್ಥ್ಯದಿಂದಾಗಿ ರಾಕ್ಷಸರು ಯಾವಾಗ ಬೇಕಾದರೂ ಬಗೆ ಬಗೆಯ ಆಕಾರವನ್ನು ಹೊಂದಬಲ್ಲವರಾಗಿದ್ದರು. ಯಾತು ಕ್ರಿಯೆಯ ಲೆಕ್ಕಾಚಾರದಂತೆ ವಿಶ್ವದ ಪ್ರತಿಯೊಂದು ವಸ್ತುವಿನಲ್ಲೂ ಒಂದು ಬಗೆಯ ಸುಪ್ತ ಸಾಮರ್ಥ್ಯವಿದ್ದು, ಮಂತ್ರಗಳನ್ನು ಸರಿಯಾಗಿ ಉಚ್ಚರಿಸಿ ಅದನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿ ಅದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದು ಯಾತುಧಾನರ ವಾದ.
ಯಾತು ಆದಿಮಾನವನ ಬಾಳಿಗೆ ಮುಲಾಧಾರವೆನ್ನಿಸಿತ್ತು.
ನಿಗೂಢವೂ, ಅನಾಕಲನೀಯವೂ ಆದ ಸಾಮರ್ಥ್ಯವನ್ನು ಯಾತುಧಾನರು ಬಲವಾಗಿ ನಂಬಿದ್ದರು. ಈಶ್ವರನ ಕಲ್ಪನೆಯು ಅವರಿಗೆ ಸ್ಪಷ್ಟವಾಗಿದ್ದ ಕಾರಣ ಅವರಿಗೆ ಭಕ್ತಿ ಮೂಲಕ ಅವನನ್ನು ಒಲಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಈಶ್ವರ, ಪೂಜೆ, ಅನೇಕ ಬಗೆಯ ಉಪಾಸನಾ ಸಂಪ್ರದಾಯಗಳು, ಯಜ್ಞಗಳು ಮೊದಲಾದ ಪರಿಕಲ್ಪನೆಗಳೆಲ್ಲಾ ಮೂಡಿದುದು ಸಂಸ್ಕೃತಿಯ ವಿಕಾಸದ ತರುವಾಯದಲ್ಲಿ.

ಅವರ ಪ್ರಕಾರ ಮಂತ್ರಗಳನ್ನು ವಿಧಿವತ್ತಾಗಿ ಉಚ್ಚರಿಸಿದರೆ ಇಚ್ಛಾಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ. ಹೀಗಿರುವಲ್ಲಿ ಯಾರ ಇಚ್ಛೆ, ಕೃಪೆ ಇಲ್ಲವೇ ಅವಕೃಪೆಯ ಪ್ರಶ್ನೆಯೇ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಯಾತುವಿನ ಪರಿಕಲ್ಪನೆಯಲ್ಲಿ ಈಶ್ವರನ ಪ್ರಸನ್ನತೆಗಾಗಲಿ, ಕೋಪತಾಪಗಳಿಗಾಗಲಿ ಸ್ಥಾನವಿಲ್ಲ, ಹಾಗೂ ನೈತಿಕತೆಗೂ ಅವಕಾಶವಿಲ್ಲ

ಯಾತು ಕ್ರಿಯೆಯು ಧರ್ಮಪರಿಕಲ್ಪನೆಯ ಮೊತ್ತ ಮೊದಲನೆಯ ಅವಸ್ಥೆಯೆನ್ನಿಸಿದೆ. ವಿಜ್ಞಾನಿಗಳ ಅಭಿಪ್ರಾಯದಲ್ಲಿ ಇದು ಮೊದಲ ಹಂತವೂ ಹೌದು. ಧರ್ಮ ಹಾಗೂ ವಿಜ್ಞಾನಗಳು ಸಮನಾಗಿ ನಂಬಿದುದು ಈ ಸಾಮರ್ಥ್ಯವನ್ನು. ವ್ಯತ್ಯಾಸವಿರುವುದು ಇವುಗಳ ಸಾಧನೆಗಳಲ್ಲಿ. ವಿಜ್ಞಾನದ ಒತ್ತು ಇರುವುದು ಅನುಭವ, ಪ್ರಯೋಗಗಳ ಮೇಲೆ. ಯಾತು - ಕ್ರಿಯೆಯ ಒತ್ತು ಮಾತ್ರ ಮಂತ್ರ - ತಂತ್ರಗಳ ಮೇಲೆ. ಯಾತು-ಕ್ರಿಯೆಗೆ ಬೆಂಬಲಿಸುವ ಸಂಗತಿಗಳೆಂದರೆ ನಿಗೂಢತೆ, ಮಂಕುಬುದ್ಧಿ, ಮೂಢನಂಬಿಕೆಗಳು. ವಿಶಿಷ್ಟವಾದ ಮಂತ್ರಗಳು ಹಾಗೂ ಅವುಗಳ ವಿಶಿಷ್ಟವಾದ ವಿಧಿಗಳೆಂದರೇನೆ ತಂತ್ರಗಳು. ಇಂತಹ ಯಾತುಗಳನ್ನೊಳಗೊಂಡ ಕ್ರಿಯೆಗಳ ಮೂಲಕ ಮಾನವನು ಪುರಾತನ ಕಾಲದಲ್ಲಿ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದನು. ತಂತ್ರವಿದ್ಯೆಯಲ್ಲಿ ಶಿವ-ಶಕ್ತಿ, ಪ್ರಕೃತಿ-ಪುರುಷರ ಕೂಟಗಳಿಗೆ ಪ್ರಾಮುಖ್ಯತೆ. ಇವುಗಳಿಂದ ಶಿವಪೂಜೆ, ಲಿಂಗಪೂಜೆ, ಶಕ್ತಿಪೂಜೆ, ಪಶುಬಲಿ, ನರಬಲಿಗಳ ಪರಿಕಲ್ಪನೆಗಳು ಹುಟ್ಟಿಕೊಂಡವು. ಕಾಲಾನಂತರ ಶಕ್ತಿಪೂಜೆಯಲ್ಲಿ ವಾಮಾಚರಣೆ ಸ್ವೈರಾಚರಣೆ ಸೇರಿಕೊಂಡು ಹಲವು ಸಂಪ್ರದಾಯಗಳಲ್ಲಿ ಅನಿಷ್ಟವಾದ ನಡವಳಿಕೆಗಳು ರೂಢಿಯಲ್ಲಿ ಬಂದವು.

ಮೂಲ: ಶ್ರೀ ರಘುನಾಥ ಭಿಡೆ ಅವರ "ಮಹಾಭಾರತದ ಶಪಥಗಳು" ಕೃತಿಯಿಂದ ಆಯ್ದ ಭಾಗಗಳು.

                          &&&&&&&


ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...