Friday, 8 March 2019

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ


ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತೆ ನೋಡಬಹುದು. ಮೊತ್ತಮೊದಲ ಹಂತವು " ಇಂಡಸ್" ಹಂತ. ನಂತರದ ಹಂತಗಳೆಂದರೆ ವೇದ, ಉಪನಿಷತ್, ಬೌದ್ಧ, ಪುರಾಣ, ಭಕ್ತಿ , ಓರಿಯಂಟಲಿಸ್ಟ್ ಹಾಗೂ ಕೊನೆಯದಾಗಿ ಆಧುನಿಕ ಹಂತ. ಇಂಡಸ್ - ಸರಸ್ವತಿ ನಾಗರೀಕತೆಯ ಪಳೆಯುಳುಕೆಗಳು ಹಿಂದೂಗಳಿಗೆ ಇವತ್ತಿಗೂ ಪವಿತ್ರವಾದದ್ದೆಂದು ಪರಿಗಣಿಸುವ ಪುರಾತನ ಪ್ರತಿಮಾಶಾಸ್ತ್ರವನ್ನು ಬಹಿರಂಗ ಪಡಿಸುತ್ತದೆ. ಆದರೆ ಆಗಿನ ಸಮಯದ ಬಹುತೇಕ ಜ್ಞಾನವು ಊಹಾತ್ಮಕವಾಗೇ ಇದೆ. ಅನಂತರದ ಮೂರು ಹಂತಗಳಾದ ವೇದ, ಉಪನಿಷತ್ತ್ ಹಾಗೂ ಬೌದ್ಧ ಹಂತಗಳನ್ನು ವೇದಕಾಲದ ಹಿಂದೂ ಎಂಬುದಾಗಿ ವರ್ಗೀಕರಿಸಬಹುದುಈ ಕಾಲದಲ್ಲಿ ಯಾವುದೇ ಮಂದಿರ / ದೇವಸ್ಥಾನಗಳ ಕಲ್ಪನೆ ಇರಲಿಲ್ಲ ಹಾಗೂ ದೇವರ ಬಗ್ಗೆ ಕೇವಲ ಅಮೂರ್ತ ಕಲ್ಪನೆ ಇತ್ತು. ಕಡೆಯ ನಾಲ್ಕು ಹಂತಗಳಾದ ಪುರಾಣದ ಹಂತ, ಭಕ್ತಿ ಹಂತ, ಓರಿಯಂಟಲಿಸ್ಟ್ ,ಹಾಗೂ ಆಧುನಿಕ ಹಂತಗಳನ್ನು ಪುರಾಣಕಾಲದ ಹಿಂದೂ ಎಂದು ವರ್ಗೀಕರಿಸಲಾಗಿದೆ. ಈ ಕಾಲದಲ್ಲಿ ಮಂದಿರ / ದೇವಸ್ಥಾನಗಳ ನಿರ್ಮಾಣ, ವ್ಯಕ್ತಿಗತ ದೇವರುಗಳಾದ ಶಿವ ಅಥವಾ ಅವನ ಪುತ್ರರು, ವಿಷ್ಣು ಅಥವಾ ಅವನ ದಶಾವತಾರಗಳಲ್ಲೊಂದು ಅಥವಾ ದೇವಿಯರು ಹಾಗೂ ಅವರ ಸ್ಥಳೀಯ ಅನೇಕ ರೂಪಗಳನ್ನು ಪೂಜಿಸುವ ಸಂಪ್ರದಾಯವು ಉದಯವಾಯಿತು. ಇಲ್ಲಿಯವರೆಗಿನ ಪುರಾಣ ಕಾಲದ ಹಿಂದೂ ಅವಧಿಯನ್ನು ಗೀತೆಯ ಹಿಂದಿನ ಯುಗವೆಂದು ವರ್ಗೀಕರಿಸಬಹುದು ಹಾಗೂ ನಂತರದ ಅವಧಿಯನ್ನು ಗೀತೆಯ ನಂತರದ ಅವಧಿಯೆಂದು ಹಿಂದೂ ಚರಿತ್ರೆಯಲ್ಲಿ ಗೀತೆಯ ಪ್ರಮುಖ ಪಾತ್ರವನ್ನು ಗುರುತಿಸುವ ಸಲುವಾಗಿ ಪರಿಗಣಿಸಬಹುದು.

ವೇದಕಾಲದ ಹಂತವು ಸುಮಾರು 4000 ವರ್ಷಗಳಿ ಗಿಂತ ಮುಂಚಿತವಾಗಿ, ಉಪನಿಷತ್ ಹಂತವು 3000 ವರ್ಷ, ಬೌದ್ಧ ಹಂತವು 2500  ವರ್ಷ, ಪೌರಾಣಿಕ ಹಂತವು 2000 ವರ್ಷ, ಭಕ್ತಿ ಹಂತವು 1000 ವರ್ಷ, ಓರಿಯಂಟಲಿಸ್ಟ್ ಹಂತವು 200 ವರ್ಷ. ಆಧುನಿಕ ಹಂತವು ಭಾರತೀಯರು ಇಲ್ಲಿಯವರೆಗಿನ ಪಾಶ್ಚಿಮಾತ್ಯ ಚೌಕಟ್ಟಿನಲ್ಲೇ ಅರ್ಥೈಸಿದ್ದ ಹಿಂದೂ ಧರ್ಮದ ಮೇಲೆ   ಪ್ರಶ್ನೆ ಎತ್ತುವುದರೊಂದಿಗೆ ಇದೀಗ ತಾನೇ ಪ್ರಾರಂಭ ವಾಗಿದೆ.

ಹಿಂದೂ ಧರ್ಮದ ಕಾಲವನ್ನು ನಿರ್ಧರಿಸುವುದು ಒಂದು ಅಂದಾಜು ಮಾತ್ರ ಹಾಗೂ ಇವುಗಳು ಊಹಾತೀತ ವಾಗಿಲ್ಲ. ಏಕೆಂದರೆ ಬಾಯಿಂದ ಬಾಯಿಗೆ ವರ್ಗಾಂತರವಾದ ಗ್ರಂಥಗಳು ಅನೇಕ ಶತಮಾನದ ನಂತರವೇ ಬರಹದ ಮೂಲಕ ಪ್ರಕಟಗೊಂಡಿತು ಹಾಗೂ ಹಲವು ಬರಹದ ಮೂಲಕ ಹೊರಬಂದ ಕೃತಿಗಳನ್ನು ಹಲವಾರು ತಲೆಮಾರುಗಳ ಹಾಗೂ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಚಿಸಲ್ಪಟ್ಟಿದೆ. ಪ್ರತಿಯೊಂದೂ ಒಂದು ರೀತಿಯಲ್ಲಿ ಕಗ್ಗಂಟಾಗಿದೆ ಏಕೆಂದರೆ ಭಾರತದಲ್ಲಿ ಬರವಣಿಗೆಯ ಯುಗವು ಪ್ರಾರಂಭವಾದದ್ದೇ ಸುಮಾರು 2300 ವರ್ಷಗಳ ಹಿಂದೆ ಮಾತ್ರ, ಮೌರ್ಯ ಚಕ್ರವರ್ತಿ ಅಶೋಕನು ಬ್ರಾಹ್ಮೀ  ಹಸ್ತಾಕ್ಷರವನ್ನು ತನ್ನ ಶಾಸನಗಳ ಮೂಲಕ ಜನಪ್ರಿಯ ಗೊಳಿಸಿದ ನಂತರ.

ಐತಿಹಾಸಿಕ ಮಾರ್ಗದಲ್ಲಿ ಹಿಂದೂಧರ್ಮದ ಕಾಲವನ್ನು ನಿರ್ಧರಿಸುವುದು ಎಲ್ಲ ಹಿಂದೂ ಧರ್ಮದವರಿಗೂ ಸಮ್ಮತವಾಗುವುದಿಲ್ಲ. ಕೆಲವರ ಅಭಿಮತದಂತೆ ಹಿಂದೂ ಧರ್ಮಕ್ಕೆ ಕಾಲದ ಮಿತಿಯಿಲ್ಲ. ಮತ್ತೆ ಕೆಲವು ಕಟ್ಟಾ ಹಿಂದೂ ಅಭಿಮಾನಿಗಳ ಪ್ರಕಾರ ಹಿಂದೂ ಧರ್ಮದ ಕ್ರಿಯೆಗಳು, ಕಥೆಗಳು, ಮೂರ್ತಿಗಳು, ವೇದ ಅಥವಾ ಪುರಾಣಗಳು ಒಂದೇ ಕಾಲದಲ್ಲಿ ಸುಮಾರು 5000 ವರ್ಷಗಳ ಹಿಂದೆಯೇ ಸೃಷ್ಟಿಯಾಯಿತೆಂಬ ವಾದ. ಚರಿತ್ರೆಯು ಪ್ರತಿಯೊಬ್ಬರ ಸತ್ಯವನ್ನು ಅರಸುತ್ತದೆ ಆದರೆ ಅದರ ಮುಂದಿರುವ ಅಂಶಗಳು ಸೀಮಿತವಾಗಿರುತ್ತದೆ.
ಎಷ್ಟೋಬಾರಿ ಚರಿತ್ರೆ ಎಂದು ಭಾವಿಸುವ ಕಥೆಗಳು, ಘಟನೆಗಳು, ಪೌರಾಣಿಕವಾಗಿರಬಹುದು ಅಥವಾ ಬೇರೆಯವರ ನೆನಪಿನಿಂದ ಹೊರಬಂದ ಇಲ್ಲವೇ ಆಸೆಗಳು, ಭಾವನೆಗಳೂ ಸಹ ಚರಿತ್ರೆಯೆಂದು ಪ್ರಚಲಿತವಾಗಬಹುದು. ಏನೇ ಆದರೂ ಇದು ಕೇವಲ ಕಲ್ಪನೆಯೇ ಹೊರತು ನಿಜವಲ್ಲ.

ಮೂಲ : ದೇವದುತ್ ಪಾಟ್ನಾಯಕ್ ಅವರ 'ಮೈ ಗೀತ' ಕೃತಿಯಿಂದ ಆಯ್ದ ಭಾಗಗಳ ಕನ್ನಡಾನುವಾದ.


No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...