Friday, 8 March 2019

ನಾಗರಿಕತೆಯು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿದೆಯೇ?


ನಾಗರಿಕತೆಯು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿದೆಯೇ?
ಒಂದು ವಿಶ್ಲೇಷಣೆ

ಜಗತ್ತಿನ ಜೀವರಾಶಿಗಳಲ್ಲಿ ಮನುಷ್ಯ ಜೀವಿಗೆ ಮಾತ್ರ ಹೆಚ್ಚಿನ ಆದ್ಯತೆ ಮತ್ತು ಮನ್ನಣೆ ಇರುವುದಕ್ಕೆ ಕಾರಣವೆಂದರೆ ಮನುಷ್ಯನು ಸಂಘಜೀವಿ ಹಾಗು ನಿರ್ಧಿಷ್ಟ ಗುರಿಯನ್ನು ತಲುಪಲು ಮಾನವನು ಸಂಘಟಿತ ಹೋರಾಟವನ್ನು ಮಾಡುತ್ತಾನೆ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನದ ಸಂವಹನೆಯಾಗುವುದು ಮನುಷ್ಯರಲ್ಲಿ ಮಾತ್ರ. ಹೀಗೆ ಸಂವಹನೆಯಾದ ಜ್ಞಾನವನ್ನು ವೃದ್ಧಿಸಿ ಮುಂದಿನ ಪೀಳಿಗೆಗೆ ಕೊಡುತ್ತಾ ಮಾನವನು ಬಲಿಷ್ಠವಾಗುತ್ತಾ ಬರುತ್ತಾನೆ.

ನಮಗೆ ಒಂದು ಸಂದೇಹ ಬರುವುದೇನೆಂದರೆ ಪ್ರಾಣಿಗಳೂ ಸಹ ಸಂಘಜೀವಿಗಳಲ್ಲವೇ? ಹಾಗಿದ್ದಲ್ಲಿ ಅವಕ್ಕೂ ಮಾನವನ ಜೀವನಕ್ಕೂ ಕಂಡುಬರುವ ವ್ಯತ್ಯಾಸವೇನು ಎಂಬ ಸಂದೇಹ ಉತ್ಪತ್ತಿಯಾಗಬಹುದು. ಪ್ರಾಣಿಗಳು ಸಂಘಜೀವಿಗಳಾದರೂ ಸಂಘಟನಾ ಶಕ್ತಿಯು ಮಾನವನಲ್ಲಿ ಹೆಚ್ಚಿರುತ್ತದೆ. ಅಲ್ಲದೇ ಮಾನವನು ತನ್ನ ಉಳಿವಿಗಾಗಿ ಹೋರಾಡುತ್ತಾನೆ ಹಾಗೂ ಸ್ಪರ್ಧಿಸುತ್ತಾನೆ. ಕೆಲವೊಮ್ಮೆ ಪ್ರತಿಸ್ಪರ್ಧಿಗಳ ವಿರುದ್ಧ ಯುದ್ಧ ಸಾರುತ್ತಾನೆ, ಮತ್ತೂಮ್ಮೆ ಶಾಂತಿ ಮಂತ್ರವನ್ನು ಜಪಿಸುತ್ತಾನೆ.

ಒಟ್ಟಿನಲ್ಲಿ ಮನುಷ್ಯನು ಏಕಾಂಗಿಯಾಗಿ ಬದುಕಲಾರ. ಮಾನವನಿಗೆ ಒಂದು ಜೀವನ ಶೈಲಿ ಬೇಕೇ ಬೇಕು. ಜಗತ್ತಿನಲ್ಲಿ ಬದುಕಲು ನೂರಾರು ದಾರಿಗಳಿದ್ದರೂ ಪ್ರತಿ ನಾಗರೀಕತೆಯು ತನ್ನದೇ ಆದ ದಾರಿಯಲ್ಲಿ ಸಾಗುತ್ತದೆ. ಆದರೆ ನಾವು ಜಗತ್ತಿನ ಜನರ ಜೀವನ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಸತ್ಯವೇನೆಂದರೆ ನಾವು ಸಮೃದ್ಧ ಬದುಕನ್ನು ಸಾಗಿಸಲು ಇರುವುದು ಎರಡು ವಿಧವಾದ ಜೀವನ ಶೈಲಿಗಳೆಂಬುದು. ಅವುಗಳೆಂದರೆಪುರುಷ ಜೀವನ ಶೈಲಿಮತ್ತುಸ್ತ್ತ್ರೀ ಜೀವನ ಶೈಲಿ”. ಇವುಗಳ ಬಗ್ಗೆ ಮತ್ತಷ್ಟು ಹೆಚ್ಚಿನ ಸಂಶೋಧನೆಯನ್ನು ಮಾಡಿದಾಗ ಕಂಡುಬರುವುದೇನೆಂದರೆ -

ಪುರುಷ ಜೀವನ ಶೈಲಿ ಎಂದರೆ ಒಂದು ನಿರ್ಧಿಷ್ಟ ತತ್ವ, ಸಿದ್ದಾಂತ, ಕಾನೂನು, ಕಟ್ಟಳೆಗಳಿಗೆ ಬದ್ಧರಾಗಿ ಬದುಕುವುದು. ಪುರುಷ ಶೈಲಿಯಲ್ಲಿ ಕಾನೂನಿಗೆ ಅತ್ಯಂತ ಮಹತ್ವ ಹಾಗೂ ಅದನ್ನು ಬದಲಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಎಲ್ಲರೂ ಅದಕ್ಕೆ ಬದ್ಧರಾಗಿರಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಇಲ್ಲಿ ಎಲ್ಲವು ಸ್ಪಷ್ಟ ಹಾಗೂ ಗೊಂದಲಕ್ಕೆ ಅವಕಾಶವಿಲ್ಲ. ಎಲ್ಲವೂ ನಿಯಮದ ಪ್ರಕಾರ ನಡೆಯುವುದರಿಂದ ಬದುಕೂ ಕೂಡಾ ನಿರೀಕ್ಷೆಯಂತೆ ಸಾಗುತ್ತದೆ.

ಸ್ತ್ರೀ ಜೀವನ ಶೈಲಿಯೇನೆಂದರೆ ಸಂಭವನೀಯತೆಯಿಂದ ಒಳಗೊಂಡ ಬದುಕು. ಈ ಜೀವನ ಶೈಲಿಯನ್ನು ಅನುಸರಿಸುವ ಜನ ಯಾವಾಗಲೂ ಸರ್ವತಂತ್ರ ಸ್ವತಂತ್ರರು ಹಾಗೂ  ಸ್ವೇಚ್ಛಾಚಾರಿಗಳು. ಒಂದು ವಿಧವಾದ ನಿರಂಕುಶ ಪ್ರಭುತ್ವಕ್ಕೆ ಹೊಂದಿಕೊಂಡಿರುವವರು. ಇವರು ಯಾವುದೇ ಕಾನೂನಿಗೆ ಒಳಪಟ್ಟಿರುವುದಿಲ್ಲ. ಆಯಾ ಕಾಲ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದುಕನ್ನು ಬದಲಾಯಿಸಿಕೊಳ್ಳುವ ಜನ. ಯಾವ ಪಕ್ಷ ಅಥವಾ ರಾಜನು ಅಧಿಕಾರದಲ್ಲಿರುತ್ತಾರೋ ಅವರು ಹೇಳಿದ್ದೇ ಅಲ್ಲಿಯ ಜನಗಳಿಗೆ ಸಿದ್ದಾಂತ, ನೀತಿ ಹಾಗೂ ನಿಯಮ. ಮುಂದಿನ ದಿನಗಳನ್ನು ಮತ್ತೊಂದು ಪಕ್ಷ ಅಥವಾ ಮತ್ತೊಬ್ಬ ರಾಜನು ಅಧಿಕಾರಕ್ಕೆ ಬಂದಾಗ ಅಲ್ಲಿನ ಜನಗಳ ನಿಷ್ಠೆಯು ಬದಲಾಗುತ್ತದೆ. ಈ ವಿಧದ ಸಮಾಜದಲ್ಲಿ ಕಾನೂನಿನಲ್ಲಿ ಸ್ಥಿರತೆ ಇರುವುದಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾಗುತ್ತವೆ. ಇಂತಹ ಸಮಾಜದಲ್ಲಿ ಬದಲಾವಣೆಯೇ ಸ್ಥಿರತೆ.  ಇಂತಹ ವ್ಯವಸ್ಥೆಯ ಯಶಸ್ವಿಗೆ ಉತ್ಸಾಹ, ಸೌಂದರ್ಯ ಮತ್ತು ಸ್ವೇಚ್ಛಾಚಾರಗಳು ಮಾತ್ರ ಕಾರಣವಾಗುವುದು.

ಪುರುಷ ಜೀವನ ಶೈಲಿಯ ನಾಗರಿಕತೆಯು ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಸ್ಥಿರತೆ, ಗೌರವ ಹಾಗೂ ನಂಬಿಕೆ ಇರುತ್ತವೆ. ಕಾನೂನಿಗೆ ಅತಿ ಹೆಚ್ಚು ಮಹತ್ವ ಇರುತ್ತದೆ. ಸಮಾಜವು ನಿರ್ದಿಷ್ಟ ದಿಕ್ಕಿನಲ್ಲಿ ಅಡೆತಡೆಯಿಲ್ಲದೇ ಸಾಗುತ್ತಿರುತ್ತದೆ. ಆದರೆ ಇದೇ ನಾಗರಿಕತೆಯು ಅವಸಾನದ ಅಂಚಿನಲ್ಲಿರುವಾಗ ಅದರ ಪರಿಣಾಮವು ಭಯಂಕರ. ಅಂತಹ ಸಂದರ್ಭದಲ್ಲಿ ಪ್ರಕ್ಷುಬ್ದ ವಾತಾವರಣವು ಉಂಟಾಗಿ ಪ್ರಜೆಗಳು ದಂಗೆ ಏಳಬಹುದು. ಜನರು ಧರ್ಮಾoಧರಾಗುತ್ತಾರೆ ಹಾಗೂ ನಿಷ್ಠುರವಾದಿಗಳಾಗುತ್ತಾರೆ. ಅಂತಹ ಸಂದರ್ಭದಲ್ಲಿ ಜನಗಳು ತಾವು ಸತ್ಯವೆಂದು ನಂಬಿದ ತತ್ತ್ವಗಳನ್ನು ಸಾಮಾನ್ಯ ಜನಗಳ ಮೇಲೆ ಬಲವಂತವಾಗಿ ಹೇರುವ ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಜನಗಳು ದಂಗೆ ಏಳುವ ಸಾಧ್ಯತೆಯೇ ಹೆಚ್ಚು. ಸಾಮಾನ್ಯವಾಗಿ ಬದಲಾವಣೆಯ ಸಂದರ್ಭದಲ್ಲಿ ಇಂತಹ ದಂಗೆಗಳು ಏಳುತ್ತವೆ. ಪುರುಷ ಜೀವನವನ್ನು ಅನುಸರಿಸುವ ಜನಗಳು ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರುವುದಿಲ್ಲ. ಹಳೆಯ ಕಾನೂನುಗಳು ಹೊಸ ಸಂದರ್ಭಕ್ಕೆ ಅನ್ವಯವಾಗದಿದ್ದರೂ ಅದರ ಪಾಲನೆಗೆ ಮುಂದಾಗುತ್ತಾರೆ. ಆದುದರಿಂದ ನಾಗರಿಕತೆಯು ಬಲಿಷ್ಠವಾಗಿರುವಾಗ ಮಾತ್ರ ಪುರುಷ ಶೈಲಿಯ ಸಮಾಜವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಸಮಾಜವು ವಿನಾಶದ ಅಂಚಿಗೆ ಬಂದಾಗ ಅದೇ ಪುರುಷ ಶೈಲಿಯು ಸಮಾಜಕ್ಕೆ ಮುಳುವಾಗುತ್ತದೆ.  ಹಿಂದೆ ಪುರುಷ ಶೈಲಿ ಸಮಾಜವನ್ನು ಅನುಸರಿಸುತ್ತಿದ್ದ ಅಸುರರು ತಮ್ಮ ಶಕ್ತಿಯು ಕುಂದತೊಡಗಿದಾಗ ಅವನತಿಯತ್ತ ಸಾಗಿದ ಅನೇಕ ಉದಾಹರಣೆಗಳು ನಮ್ಮ ಪುರಾಣಗಳಲ್ಲಿರುವುದನ್ನು ನಾವು ಗಮನಿಸಬಹುದು.   ಅಂತಹ ಸಂದರ್ಭಗಳಲ್ಲಿ ಸ್ತ್ರೀ ಶೈಲಿ ಸಮಾಜವು ಪರಿಹಾರವನ್ನು ಸೂಚಿಸಬಹುದು. ಏಕೆಂದರೆ ಸ್ತ್ರಿ ಶೈಲಿ ಸಮಾಜದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳಿಗೂ ಅವಕಾಶವಿರುತ್ತದೆ. ಭಿನ್ನ ನಂಬಿಕೆ, ಶ್ರದ್ಧೆ ಹಾಗೂ ಬದ್ಧತೆ ಇರುವ ಜನರಿಗೆ ಶಾಂತಿ, ನೆಮ್ಮದಿಯಿಂದ ಬದುಕುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ತಾವು ನಂಬಿರುವುದೇ ಸತ್ಯ ಎಂಬುದನ್ನು ಯಾರೂ ಯಾರ ಮೇಲು ಹೇರುವುದು ಇಲ್ಲಿ ಅಸಾಧ್ಯ. ಇದರ ವೈಶಿಷ್ಟ್ಯವೆಂದರೆ ವಿವಿಧತೆಯಲ್ಲಿ ಏಕತೆ ಹಾಗೂ ಭಿನ್ನತೆಯಲ್ಲಿ ಐಕ್ಯತೆ. ಈ ಸಮಾಜದಲ್ಲಿ ತಮಗೆ ಬೇಕಾದಂತೆ ಬದುಕುವ ಸ್ವಾತಂತ್ರ್ಯವನ್ನು ಜನಗಳಿಗೆ ನೀಡುತ್ತದೆ. ಹಾಗಾಗಿ ಇದು ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಆದರೆ ಅತಿಯಾದ ಸ್ವಾತಂತ್ರ್ಯ, ಸ್ವೇಚ್ಚಾಚಾರವು ಭ್ರಷ್ಟಾಚಾರ ಹಾಗೂ ಅರಾಜಕತೆಗೆ ನಾoದಿಯನ್ನು ಹಾಡುತ್ತದೆ.

ಈ ಪುರುಷ ಹಾಗು ಸ್ತ್ತ್ರೀ ಜೀವನ ಶೈಲಿಗಳು ಕೇವಲ ನಾಗರಿಕ ಸಮಾಜಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇವುಗಳು ವ್ಯಕ್ತಿಗತವಾಗಿಯೂ ಇರಬಹುದು. ಅಂದರೆ ಪುರುಷ ಹಾಗು ಸ್ತ್ರೀಯರಲ್ಲೂ ಈ ರೀತಿಯ ಗುಣಗಳು ಇರುವ ಸಾಧ್ಯತೆ ಇದೆ. ಆದರೆ ಬಹುತೇಕ ಮಂದಿ ಒಂದೇ ರೀತಿಯ ಜೀವನ ಶೈಲಿಯನ್ನು ಆರಿಸಿಕೊಳ್ಳುತ್ತಾರೆ.

ಮೂಲ: ಅಮಿಶ್ ಅವರ ಶಿವ ಟ್ರಿಯೊಲೊಜಿ
ಕನ್ನಡಕ್ಕೆ ಭಾಷಾoತರ.



No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...