Friday, 8 March 2019

ನಮ್ಮೊಳಗೊಬ್ಬ ನಾಜೂಕಯ್ಯ – ನಾಟಕ ವಿಮರ್ಶೆ


ನಮ್ಮೊಳಗೊಬ್ಬ ನಾಜೂಕಯ್ಯ ನಾಟಕ ವಿಮರ್ಶೆ

ಜನವರಿ 24ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದನಮ್ಮೊಳಗಿನ ನಾಜೂಕಯ್ಯ,” ನಾಟಕದ ಬಗ್ಗೆ ಕೆಲವು ಮಾತುಗಳು:

ಈ ನಾಟಕವನ್ನು ಹೆಸರಾಂತ ನಾಟಕಕಾರ, ನಿರ್ದೇಶಕ, ಸಮಾಜ ಸುಧಾರಕ ಹಾಗೂ ನಟ ಶ್ರೀ.ಟಿ.ಏನ್. ಸೀತಾರಾಮ್ ಅವರು ಬರೆದು 5 ವರ್ಷಗಳ ಹಿಂದೆಯೇ ನಿರ್ದೇಶಿಸಿ ಹಾಗೂ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಅದನ್ನು ಐದು ವರ್ಷಗಳ ನಂತರ ಮತ್ತೊಮ್ಮೆ ಅದೇ ತಂಡವು ಅವರನ್ನು ಹೊರತು ಪಡಿಸಿ (ಬಹುಷಃ ಅವರ ಅನಾರೋಗ್ಯದ ಕಾರಣವಿರಬಹುದು) ಪ್ರದರ್ಶಿಸಿತು.

ನಾಟಕದ ವಿಷಯವು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತದ್ದು, ಅಷ್ಟೇಕೆ ಅದು ಸಾರ್ವಕಾಲಿಕವಾದದ್ದು ಎಂದರೆ ತಪ್ಪಾಗಲಾರದು, ಹಾಗೂ ಇದು ಈಗಿನ ಪರಿಸ್ಥಿತಿಯಲ್ಲಿ ಭಾರತದುದ್ದಗಲ ದಲ್ಲೂ ಹಾಸುಹೊಕ್ಕಾಗಿದೆ. ಮೂಲ ವಿಷಯವೆಂದರೆ ಸತ್ಯ, ಧರ್ಮ, ನ್ಯಾಯ, ಆತ್ಮಸಾಕ್ಷಿ ಇವುಗಳು ಒಂದೆಡೆಯಾದರೆ, ಅವುಗಳನ್ನು ತುಳಿಯುವ ವಿರುದ್ಧವಾದ  ಭ್ರಷ್ಟ ವ್ಯವಸ್ಥೆಯ ನಡುವಿನ ಘರ್ಷಣೆ.   ನಾಟಕವನ್ನು ಅತ್ಯಂತ ಯಶಸ್ವಿಯಾಗಿ, ಸಮರ್ಪಕವಾಗಿ ಮತ್ತು ನಾಜೂಕಾಗಿ, ಅತ್ಯಂತ ಅನುಭವಿ ನಿರ್ದೇಶನದಲ್ಲಿ ಹಾಗೂ ಪಾತ್ರಧಾರಿಗಳ ನಟನೆಯ ಮೂಲಕ ನಿರ್ವಹಿಸಲಾಗಿದೆ ಎಂದರೆ ತಪ್ಪಾಗಲಾರದು.

ನಾಟಕದ ಪೂರ್ವಾರ್ಧವು ಹಾಸ್ಯಮಿಶ್ರಿತ ಸಂಭಾಷಣೆಯಿಂದ ಒಳಗೊಂಡಿದ್ದರೂ ಕೆಲವೇ ಸಮಯದಲ್ಲಿ ಅದು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ಹಾಸ್ಯಮಿಶ್ರಿತ ಸಂಭಾಷಣೆಗಳು ಛಾಯಾಚಿತ್ರಗ್ರಾಹಕನ ಪಾತ್ರದಲ್ಲಿ ಹೆಚ್ಚಾಗಿ ಬರುವುದು. ಈ ಪಾತ್ರವನ್ನು 77 ವರ್ಷದ ನವಯುವಕ ಶ್ರೀ.ವೆಂಕಟರಾವ್ ಅವರು ನಿರ್ವಹಿಸಿದ್ದಾರೆ. ಅವರ ನಟನೆಯು ಅತ್ಯಂತ ಅಮೋಘವಾಗಿತ್ತು. ಅವರ ಸಂಭಾಷಣೆಯ ಹಿಂದೆ ಅವರ ಪಾತ್ರದಲ್ಲಿನ ಪ್ರಸ್ತುತ ಜೀವನದ ವಿಡಂಬನೆಗಳು ಎದ್ದು ಕಾಣುತ್ತಿದ್ದವು. ಅವರ ಪಾತ್ರಾಭಿನಯದ ಶ್ರೇಷ್ಠತೆಗೆ ನಾಟಕದ ಕೊನೆಯಲ್ಲಿ ಪಾತ್ರ ಪರಿಚಯದ ಸಂದರ್ಭದಲ್ಲಿ ಅವರಿಗೆ ಎದ್ದುನಿಂತ ಪ್ರೇಕ್ಷಕರಿಂದ ದೊರೆತ ಅಭಿಮಾನಪೂರ್ವಕ ದೀರ್ಘ ಕರತಾಡನವೇ ಸಾಕ್ಷಿ ಎಂದರೆ ತಪ್ಪಾಗಲಾರದು.

ನಾಟಕವು ನಿಧಾನವಾಗಿ ಮುಂದುವರೆಯುತ್ತಾ ಉದ್ಯಮಿ ಪ್ರಸಾದ್ ಅವರ ಪ್ರವೇಶದಿಂದ ಹೊಸ ತಿರುವು ಪಡೆದುಕೊಳ್ಳುತ್ತದೆ. ಉದ್ಯಮಿ ಪ್ರಸಾದ್ ಒಬ್ಬ ಎಲೆಕ್ಟ್ರಾನಿಕ್ಸ್ ಎಂಜಿನಿಯರ್. ಅವರು ಕೆಲವು ಕಾಲ ಸರ್ಕಾರಿ ಕೆಲಸದಲ್ಲಿದ್ದು ನಂತರ ಆ ಹುದ್ದೆಗೆ ರಾಜೀನಾಮೆ ಇತ್ತು ತನ್ನದೇ ಆದ ಒಂದು ಸಣ್ಣ ಫ್ಯಾಕ್ಟರಿಯನ್ನು ಶುರುಮಾಡಿ ತಮ್ಮ ಸಂಶೋಧನೆಯಿಂದ ಎಲೆಕ್ಟ್ರಾನಿಕ್ಸ್ ಹೊಸ ಬಿಡಿಭಾಗವನ್ನು ತಯಾರಿಸಿ ಅದನ್ನು ರಕ್ಷಣಾ ಇಲಾಖೆಗೆ ಸರಬರಾಜು ಮಾಡಲು 50 ಲಕ್ಷದ ಸರಕು ಒದಗಿಸುವ ಕೋರಿಕೆಯನ್ನು ಪಡೆದಿರುತ್ತಾರೆ. ಆದರೆ ಅದಕ್ಕೆ ಮೊದಲು ಅವರು ಸರ್ಕಾರಿ ಇಲಾಖೆಯಿಂದ ವೈಯುಕ್ತಿಕ ಅನುಮತಿಯನ್ನು ಪಡೆಯಬೇಕಿರುತ್ತದೆ.
ಈ ಮಧ್ಯೆ ಪ್ರಸಾದ್ ಅವರು ಉದ್ಯಮಿಯಲ್ಲದೆ ಹೆಸರಾಂತ ಕವಿ, ಅಂಕಣ ಬರಹಗಾರರು. ಅವರ ಲೇಖನಗಳು ಸಾಕಷ್ಟು ಚುರುಕಾಗಿದ್ದು ಹಲವಾರು ಉದ್ಯಮಗಳ ಅವ್ಯವಹಾರವನ್ನು ಬಯಲಿಗೆಳೆಯುತ್ತಿತ್ತು. ಇದನ್ನು ಸಹಿಸದ ಉದ್ಯಮಿಯೊಬ್ಬನು ಪ್ರಸಾದ್ ಹಿಂದೆ ಕೆಲಸ ಮಾಡುತ್ತಿದ್ದ ಇಲಾಖೆಯ ಮೇಲೆ ತನ್ನ ಪ್ರಭಾವ ಬೀರಿ ಪ್ರಸಾದ್ ವಿರುದ್ಧ ವಿಚಾರಣೆಯನ್ನು ನಡೆಸುವಂತೆ ಮಾಡುವಂತೆ ಪ್ರೇರೇಪಿಸಿ ಪ್ರಸಾದ್ ಅವರಿಗೆ ವೈಯುಕ್ತಿಕ ಅನುಮತಿ ದೊರೆಯುವುದನ್ನು ತಪ್ಪಿಸಿ ಹೇಗಾದರೂ ಮಾಡಿ ಅವರ ಮೇಲೆ ಸಿಬಿಐ ವಿಚಾರಣೆ ಮಾಡುವ ಹಂತವನ್ನು ತಲುಪುವಂತೆ ಮಾಡುತ್ತಾನೆ.

ಈ ಮಧ್ಯೆ ಪ್ರಸಾದ್ ಅವರ ಪತ್ನಿ ಶ್ರೀಮತಿ.ಮಾಲತಿ ಪ್ರಸಾದ್ (ಮಾಜಿ ಸಿನಿಮಾ ನಟಿಯೂ ಹೌದು) ಅವರಿಗೆ ಅವರ ತಂದೆಯ ಕುಟುಂಬ ಸ್ನೇಹಿತನ ಮಗ ನಾರಾಯಣ ಸ್ವಾಮಿಯು ತನ್ನ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದ ವಿದ್ಯಾಸಂಸ್ಥೆಯಲ್ಲಿ ಮಾಲತಿಯವರಿಗೆ ಕೃತಜ್ಞತೆಯ ಕುರುಹಾಗಿ ಕೆಲಸವನ್ನು ಕೊಡಿಸಿರುತ್ತಾನೆ ಹಾಗೂ ಅವರಿಗೆ ಅವರ ಕಷ್ಟವನ್ನು ಮನಗಂಡು 2000 ರೂ ಸಂಬಳವನ್ನೂ ಹೆಚ್ಚು ಮಾಡಿರುತ್ತಾನೆ. ಸತ್ಯ ಹಾಗೂ ಆತ್ಮ ಸಾಕ್ಷಿಗೆ ಹೆಚ್ಚು ಮಹತ್ವವನ್ನು ನೀಡುವ ಪ್ರಸಾದ್ ಅವರಿಗೆ ಇದು ರುಚಿಸುವುದಿಲ್ಲ. ಮುಂದುವರೆದು ಪ್ರಸಾದ್ ಅವರು ಸಾಲ ಪಡೆದ ಬ್ಯಾಂಕಿನಿಂದ 20 ಲಕ್ಷ ಸಾಲದ ಮರುಪಾವತಿಗೆ ಒತ್ತಾಯ, ಕಾರ್ಮಿಕ ಸಂಘದ ನಾಯಕನಿಂದ ಬಂದ ಧಮ್ಕಿ, ಸರ್ಕಾರಿ ಇಲಾಖೆಯ ವಿಚಾರಣೆ ಹಾಗೂ ಅವರು ನಂಬಿದ ಮೌಲ್ಯಗಳು ಇವೆಲ್ಲದರಿಂದ ಉಂಟಾದ ಘರ್ಷಣೆಯಿಂದ ನಿದ್ದೆಗೆಡುತ್ತಿರುವಾಗ, ಪತ್ನಿ ಮಾಲತಿಯು ನರಸಿಂಹ ಮೂರ್ತಿಯಿಂದ 20 ಲಕ್ಷ ಸಾಲ ತರುವುದಾಗಿ ಸೂಚಿಸಿದಾಗ ಪ್ರಸಾದನು ತಾಳ್ಮೆಯನ್ನು ಕಳೆದುಕೊಂಡು ಪತ್ನಿ ಮಾಲತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಕೂಡಲೇ ಪಶ್ಚಾತ್ತಾಪ ಪಟ್ಟು ಅವಳಲ್ಲಿ ಕ್ಷಮೆ ಯಾಚಿಸುತ್ತಾನೆ. ಇದು ಅವನ ಮನಸ್ಸಿನಲ್ಲಿ ನಡೆಯುತ್ತಿದ್ದ ಅವನು ನಂಬಿದ ಮೌಲ್ಯಗಳು ಹಾಗೂ ಕೊಳೆತು ನಾರುತ್ತಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ಸಂಘರ್ಷಕ್ಕೆ ಕನ್ನಡಿ ಹಿಡಿಯುವ ಘಟನೆ.

ಈ ಮಧ್ಯೆ ಇನ್ಸುರೆನ್ಸ್ ಏಜೆಂಟ್ ಒಬ್ಬನ ಪ್ರವೇಶವಾಗುತ್ತದೆ. ಅವನು ಫ್ಯಾಕ್ಟರಿಗೆ ಬೆಂಕಿ ಇಟ್ಟು ಇನ್ಸುರೆನ್ಸ್ ಹಣವನ್ನು ಪಡೆಯುವ ಸಲಹೆಯನ್ನು ನೀಡಿದರೂ ಅದು ತಾನು ನಂಬಿದ ಮೌಲ್ಯಗಳಿಗೆ ವಿರುದ್ಧವಾಗಿರುವುದರಿಂದ, ಪ್ರಸಾದ್ ಸಾರಾ ಸಗಟಾಗಿ ತಿರಸ್ಕರಿಸಿ ತನ್ನ ಮಾನಸಿಕ ಉದ್ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾನೆ.

ತನ್ನ ತಪ್ಪೇ ಇಲ್ಲದಿದ್ದರೂ ಸಂದರ್ಭಗಳು ತನಗೆ ವಿರುದ್ಧವಾಗಿ, ಅದರ ಪರಿಣಾಮವಾಗಿ ಪ್ರಸಾದನಿಗೆ ತಾನು ರೌಡಿಗಳಿಂದ ಹೋಡೆತ ತಿನ್ನುವ, ಸಿಬಿಐ ವಿಚಾರಣೆಯ ಒತ್ತಡ, ಬ್ಯಾಂಕಿನ ಸಾಲದ ಹೊರೆ, ಹಾಗೂ ಡಿಫೆನ್ಸ್ ಆರ್ಡರ್ ಕ್ಯಾನ್ಸಲ್ ಆಗುವ ಸಾಧ್ಯತೆ, ಇವೆಲ್ಲದರ ಒತ್ತಡವು ಮಿತಿ ಮೀರಿ ಹೆಚ್ಚಾಗುವುದು.

ಕಡೆಗೆ ವಿಧಿಯಿಲ್ಲದೇ ಪ್ರಸಾದನು ತಾನು ನಂಬಿದ ಮೌಲ್ಯಗಳನ್ನು ತೊರೆದು ವ್ಯವಸ್ಥೆಗೆ ಹೊಂದಿಕೊಳ್ಳುವ ಸನ್ನಿವೇಶ ಉಂಟಾಗುತ್ತದೆ. ಪರಿಣಾಮವಾಗಿ ಅವನು ಮಾಲತಿಗೆ ನಾರಾಯಣ ಸ್ವಾಮಿಯಿಂದ 20 ಲಕ್ಷ ಹಣ ಕೇಳುವಂತೆ ಹೇಳುತ್ತಾನೆ. ಇದು ಅವನು ನಂಬಿದ ಮೌಲ್ಯಗಳನ್ನು ತೊರೆಯುವ ಮೊದಲನೇ ಸಂಕೇತವಾಗುತ್ತದೆ. ಅದರಂತೆ ಅಧ್ಯಕ್ಷನು ಪ್ರಸಾದನ ಮನೆಗೆ ಬಂದು ಮಾಲತಿಗೆ ಚೆಕ್ಕನ್ನು ಕೊಟ್ಟು ಹೋಗುವಾಗ ತನ್ನ ಶೂ ಎಲ್ಲಿ ಎಂದು ಹುಡುಕುತ್ತಿರುವಾಗ ಪ್ರಸಾದನೇ ಅದನ್ನು ತನ್ನ ಕೈಯಿಂದ ಎತ್ತಿ ತಂದು ಅವನಿಗೆ ನೀಡುತ್ತಾನೆ. ಈ ಕಾರ್ಯವು ಪ್ರಸಾದನ ಗೌರವಕ್ಕೆ ಬಿದ್ದ ದೊಡ್ಡ ಹೊಡೆತವಾಗುತ್ತದೆ ಹಾಗೂ ಅವನು ನಂಬಿದ ಮೌಲ್ಯಗಳಿಂದ ದೂರವಾಗುತ್ತಿರುವ ಮತ್ತೊಂದು ಸಂಕೇತವಾಗುತ್ತದೆ.

ಹೀಗಿರುವಾಗ ನಾರಾಯಣ ಸ್ವಾಮಿಯು ಪ್ರಸಾದನ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲು, ಪ್ರಸಾದ್ ದಂಪತಿಗಳನ್ನು ಮಂತ್ರಿಗಳ ಗೃಹದಲ್ಲಿ ಅವರ ಮಗಳ ಹುಟ್ಟುಹಬ್ಬದ ಸಮಾರಂಭಕ್ಕೆ ಆಹ್ವಾನಿಸುತ್ತಾನೆ. ಒಲ್ಲದ ಮನಸ್ಸಿನಿಂದ ಪ್ರಸಾದ್ ದಂಪತಿಗಳು ಅಲ್ಲಿಗೆ ಹೋದಾಗ ಅಲ್ಲಿ ಅವರು ಪ್ರಸಾದನು ಯಾವ ಉದ್ಯಮಿಯ ವಿರುದ್ಧ ಪತ್ರಿಕೆಗಳಲ್ಲಿ ಬರೆಯುತ್ತಿದ್ದನೋ ಅವನೂ ಸಹ ಸಮಾರಂಭಕ್ಕೆ ಬಂದು ಮಂತ್ರಿಗಳೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಾನೆ. ಸಮಾರಂಭ ಮುಗಿದನಂತರ ಮಂತ್ರಿ, ಉದ್ಯಮಿ, ನಾರಾಯಣ ಸ್ವಾಮಿ ಹಾಗೂ ಪ್ರಸಾದನ ನಡುವೆ ನಡೆದ ಸಂಭಾಷಣೆಯ ಸಮಯದಲ್ಲಿ ಮಂತ್ರಿಯು ಪ್ರಸಾದನು ಉದ್ಯಮಿಯೊಂದಿಗೆ ರಾಜಿಯನ್ನು ಮಾಡಿಕೊಳ್ಳಲು ಒತ್ತಾಯಿಸುತ್ತಾನೆ. ಪ್ರಸಾದನು ಅದಕ್ಕೆ ಒಪ್ಪದಿದ್ದಾಗ ಮಂತ್ರಿಯು ಅವನಿಗೆ ಸಿಬಿಐ ವಿಚಾರಣೆ, ಬ್ಯಾಂಕಿನವರ ಸಾಲ ವಸೂಲಾತಿಯ ಒತ್ತಡ ಹಾಗೂ ಇನ್ನಿತರ ಮಾರ್ಗಗಳ ಪರಿಣಾಮಗಳನ್ನು ವಿವರಿಸಿ ಅವನ ಮೇಲೆ ತೀವ್ರ ಒತ್ತಡವನ್ನು ತರುತ್ತಾನೆ. ವಿಧಿಯಿಲ್ಲದೆ ಪ್ರಸಾದನು ತಾನು ನಂಬಿದ ತನ್ನ ಮೌಲ್ಯಗಳನ್ನು ಸಂಪೂರ್ಣವಾಗಿ ತೊರೆದು ವ್ಯವಸ್ಥೆಗೆ ಶರಣಾಗಬೇಕಾಗುತ್ತದೆ.

ನಂತರ ಪ್ರಸಾದನ ಯಾವ ಮೌಲ್ಯಗಳನ್ನು ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲವೆಂದು ವಾದಿಸುತ್ತಿದ್ದ ಮಾಲತಿಯು ಯಾವಾಗ ಪ್ರಸಾದನು ತನ್ನ ಮೌಲ್ಯಗಳನ್ನು ತೊರೆದು ಭ್ರಷ್ಟ ವ್ಯವಸ್ಥೆಗೆ ಶರಣಾಗುತ್ತಿರುವುದನ್ನು ಕಂಡು ಅವಳು ಅದನ್ನು ವಿರೋಧಿಸುತ್ತಾಳೆ. ಇದು ಪ್ರಸಾದನಿಗೆ ಮತ್ತೊಂದು ವಿಪರ್ಯಾಸ.

ಪ್ರಸಾದನ ಪಾತ್ರವನ್ನು ಈ ಹಿಂದೆ ಶ್ರೀ.ಟಿ.ಎನ್.ಸೀತಾರಾಮ್ ಅವರು ಮಾಡುತ್ತಿದ್ದರು. ಆದರೆ ಈಗ ಅದನ್ನು ಶ್ರೀ.ಧೀರೇಂದ್ರ ಅವರು ಮಾಡಿದರು. ಧೀರೇಂದ್ರ ಅವರು ಈ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ಮಾಡಿದರು. ಅವರ ಸಂಭಾಷಣೆಯನ್ನು ಪ್ರೇಕ್ಷರಿಗೆ ತಲುಪಿಸುವುದು ಅತ್ಯಂತ ಶ್ರೇಷ್ಟಮಟ್ಟದ್ದಾಗಿತ್ತು. ಅವರು ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದರು. ಕ್ಲಿಷ್ಟಕರವಾದ ಅನೇಕ ಸಂದರ್ಭಗಳಲ್ಲಿ ಅವರ ಭಾವನೆಯನ್ನು ವ್ಯಕ್ತಪಡಿಸುವುದು ಹಾಗೂ ಮುಖದಲ್ಲಾಗುವ ಬದಲಾವಣೆಯು ಅತ್ಯಂತ ಶ್ರೇಷ್ಟಮಟ್ಟದ್ದಾಗಿ ಪ್ರೇಕ್ಷಕರನ್ನು ತಲೆದೂಗುವಂತೆ ಮಾಡಿತು. ಧೀರೇಂದ್ರ ಅವರು ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದರೂ ಈ ನಾಟಕದಲ್ಲಿನ ಪಾತ್ರವು ಅವರಿಗೆ ಹೆಚ್ಚಿನ ತೃಪ್ತಿಕೊಟ್ಟಿರಬಹುದು ಎಂದು ಭಾವಿಸುವೆ.

ಒಟ್ಟಾರೆ ನಾಟಕದ ಮುಖ್ಯ ವಿಷಯವಾದ ಮೌಲ್ಯಗಳು ಹಾಗೂ ಭ್ರಷ್ಟ ವ್ಯವಸ್ಥೆಗಳ ನಡುವಿನ ಸಂಘರ್ಷವು ಅತ್ಯಂತ ಪರಿಣಾಮಕಾರಿಯಾಗಿದ್ದು ಅದು ಪ್ರೇಕ್ಷಕರನ್ನು ನಾಟಕದುದ್ದಕ್ಕೂ ಕುರ್ಚಿಯ ತುದಿಯಲ್ಲೇ ಕುಳಿತು ವೀಕ್ಷಿಸುವಂತೆ ಮಾಡಿತು.

ಈ ವಿಷಯವು ವ್ಯಕ್ತಿಯೊಬ್ಬನು ಎಲ್ಲಿಯವರೆಗೆ ಮೌಲ್ಯವನ್ನು ನಂಬಿ ಜೀವಿಸಬಹುದು, ಎಷ್ಟರ ಮಟ್ಟಿಗೆ ಹಾಗೂ ಯಾವಾಗ ಅವುಗಳನ್ನು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಹಾಗೂ ಅವೆರಡರ ಇತಿ ಮಿತಿಗಳನ್ನೂ ತೋರುತ್ತದೆ.
ಇವೆಲ್ಲವನ್ನೂ ನೋಡಿದರೆ ಒಂದು ಹೇಳಿಕೆಯು ನೆನಪಿಗೆ ಬರುತ್ತದೆ. ಅದೇನೆಂದರೆ
“A Saint cannot become a successful businessman” ಎಂಬುದು.

ಸುಮಾರು 2 ಘಂಟೆಗಳ ನಾಟಕವು ಅತ್ಯಂತ ಶ್ರೇಷ್ಟಮಟ್ಟದ್ದಾಗಿ, ಅದನ್ನು ಅನುಭವೀ ತಂಡವು ಪ್ರೇಕ್ಷಕರಿಂದ ತುಂಬಿದ ಕಲಾಕ್ಷೇತ್ರದಲ್ಲಿ ಸುಂದರವಾಗಿ ಪ್ರದರ್ಶಿಸಿದರು.

No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...