ಆತ್ಮನಾಶ
- ಅವಲೋಕನ
ಆತ್ಮಹತ್ಯೆ ಯಾರಿಗೂ ಇಷ್ಟಪಡುವ ಸಂಗತಿಯಲ್ಲ. ಆದರೂ ಹಗಲೆಲ್ಲ ಇಂಥಹ ಘಟನೆಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತದೆ. ಕೆಲವು ಸಂದರ್ಭಗಳಲ್ಲಿ ಆತ್ಮಕ್ಕೆ ಸಬಂಧಿಸಿರುವುದಿಲ್ಲ. ಬಹಳಷ್ಟು ಸಮಯಗಳಲ್ಲಿ ವಧೆ, ಕೊಲೆಗಳಿರಬಹುದು. ಒಮ್ಮೊಮ್ಮೆ ಇಚ್ಛಾಮರಣವು ಇರುತ್ತದೆ. ಕೆಲವು ಸಂದರ್ಭಗಳಲ್ಲಂತೂ ಇಚ್ಛೆಗೆ ವಿರುದ್ಧವಾಗಿ ಸಾವನ್ನಪ್ಪಬೇಕಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಆಹಾರವನ್ನು ತ್ಯಜಿಸಿ ದೇಹವನ್ನು ಒಣಗಿಸಲಾಗುತ್ತದೆ.
ಬಾಳಿನ ಆರು ಅವಸ್ಥೆಗಳಲ್ಲಿ ಕೊನೆಯದೇ ಸಾವು. ಅದನ್ನು ತಪ್ಪಿಸಲಾಗದು. ಮೊದಲನೇ ಹಾಗೂ ಕಡೆಯ ಅವಸ್ಥೆಗಳಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಇನ್ನೊಂದು ಜೀವಿಯನ್ನು ಹುಟ್ಟುಹಾಕಲು ಸಾಧ್ಯ. ತನ್ನನ್ನು ತಾನೇ ಹುಟ್ಟುಹಾಕಲು ಸಾಧ್ಯವಿಲ್ಲ. ಹುಟ್ಟಿಗೆ ಬೇರೊಬ್ಬನ ಕೃತಿ ಹಾಗೂ ಕೃಪೆ ಬೇಕು. ಹುಟ್ಟಿನ ಕ್ರಿಯೆಯಲ್ಲಿ ತನ್ನ ಸ್ವಂತದ ಇಚ್ಛೆಗೆ ಯಾವುದೇ ಸ್ಥಾನವಿಲ್ಲ. ಯಾವಾಗಲೂ ಅದು ಬೇರೆಯವರ ಇಚ್ಛೆಯನ್ನು ಅವಲಂಬಿಸಿರುತ್ತದೆ. ಸಾವು ಸ್ವಲ್ಪ ಮಟ್ಟಿಗೆ ತನ್ನಿಚ್ಛೆಯನ್ನು ಅವಲಂಬಿಸಿದೆ. ಹಾಗಾಗಿಯೇ ಆತ್ಮಹತ್ಯೆ ಅಥವಾ ಆತ್ಮನಾಶ ಸಾಧ್ಯ. ಸಾವಿನ ಸಂದರ್ಭದಲ್ಲಿ ಸ್ವೇಚ್ಛಾಮರಣ, ಇಚ್ಛಾಮರಣದಂತೆ ಸ್ವೇಚ್ಚಾಜನನ ಅಸಾಧ್ಯ. ಆದರೆ ಮಹಾಭಾರತದಲ್ಲಿ ಇದಕ್ಕೆ ಒಂದು ಅಪವಾದವಿದೆ. ಅಷ್ಟ ವಸುಗಳು ತಮ್ಮ ಮುಂದಿನ ಜನ್ಮವು ಗಂಗೆಯ ಗರ್ಭದಿಂದ ಆಗಬೇಕೆಂದು ಬಯಸಿದರು. ಗಂಗೆಯು ಅದನ್ನು ಪೂರೈಸಿದಳು. ಇದನ್ನು ಇಚ್ಚಾಜನನ ಎನ್ನಬಹುದು. ಆದರೆ ಅದಕ್ಕೆ ಮಾಡಿದ ಕೃತಿ ಸ್ವಂತದ್ದಲ್ಲ. ಅದು ಇನ್ನೊಬ್ಬರದು.
ಹುಟ್ಟು, ಸಾವುಗಳು ಮಾನವನ ಕೈಮೀರಿದ್ದು ಎನ್ನುವ ಹಿಂದಿನ ಮಾತು ಇಂದಿನ ವೈಜ್ಞಾನಿಕ ಪ್ರಗತಿಯಿಂದಾಗಿ ಅರೆಸತ್ಯ ಎನ್ನಬಹುದು. ಒಂದು ಮಗುವಿಗೆ ಹುಟ್ಟು ನೀಡುವುದು, ನೀಡದೇಯಿರುವುದು ಗರ್ಭಧಾರಣೆ ಆಗುವುದು, ಆಗದಿರುವುದು, ಬೇಡವಾದಾಗ ಗರ್ಭಧಾರಣೆಯಾದರೆ ಅದನ್ನು ಕಿತ್ತು ಹಾಕುವುದು, ಹೆರಿಗೆಯ ದಿನ, ವೇಳೆಗಳನ್ನು ಕೆಲಮಟ್ಟಿಗೆ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸುವ ಸಾಮರ್ಥ್ಯವನ್ನು ಮಾನವ ಪಡೆದುಕೊಂಡಿದ್ದಾನೆ. ಆದರೆ ಸಾವನ್ನು ತಪ್ಪಿಸಲು ಮಾತ್ರ ಸಾಧ್ಯವಿಲ್ಲ. ಕೆಲವು ಬಾರಿ ಅದನ್ನು ಕೆಲಕಾಲ ಮುಂದೂಡಲು ಸಾಧ್ಯವಷ್ಟೆ. ಪುರಾಣಕಾಲದಲ್ಲೂ ಈ ಬಗೆಯ ಯತ್ನಗಳು ಸಫಲವಾಗಿದೆ. "ಸಾವು ದೇಹಧಾರಿಯ ನೈಸರ್ಗಿಕ ಕ್ರಿಯೆಯಾಗಿದ್ದು ಅವನ ಬಾಳೇ ಅನೈಸರ್ಗಿಕ" ಎಂದು ಕಾಳಿದಾಸನು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಸಾವು ಒಂದು ಶ್ರೇಷ್ಠ ಅತಿಥಿ ಎನಿಸಿದೆ. ಈ ಅತಿಥಿಯು ಯಾರಲ್ಲಿ ಯಾವಾಗ ಆತಿಥ್ಯವನ್ನು ಪಡೆಯುವನೆಂದು ಊಹಿಸಲಾಗುವುದಿಲ್ಲ. ಈ ಅತಿಥಿಯು ತಾನೆಲ್ಲಿಗೆ ಯಾವಾಗ ಹೋಗಬೇಕೆಂಬುದನ್ನು ತೀರ್ಮಾನಿಸಿಕೊಂಡಿದ್ದರೂ ಬೇರೆಯವನಿಗೆ ಸುಳಿವು ಹತ್ತದಹಾಗೆ ನೋಡಿಕೊಳ್ಳುತ್ತಾನೆ. ಅವನು ಯಾರ ಕರೆಗಾಗಿಯೂ ಕಾಯ್ದು ಕೂರುವುದಿಲ್ಲ. ಅತಿಥೇಯನಿಗೆ ಬೇಕಿರಲಿ, ಇಲ್ಲದಿರಲಿ ಈತ ತಾನು ನಿರ್ಧರಿಸಿದ ವೇಳೆಯಲ್ಲಿ ತಾನಾಗಿಯೇ ಅವನ ಮನೆಗೆ ಹೋಗಿ ತನ್ನ ಕೆಲಸವನ್ನು ಸಾಧಿಸಿಕೊಳ್ಳುತ್ತಾನೆ. ಹಾಗೆ ಅವನಿಗೆ ಕರೆ ಬೇಕಾಗಿಯೇ ಇಲ್ಲ. ಕೇವಲ ಕೆಲವರು ಮಾತ್ರ ಅವನಿಗೆ ಕರೆ ನೀಡುತ್ತಾರೆ. ಇದು ಅತಿ ವಿರಳ. ಅಂತಹ ಸಂದರ್ಭಗಳಲ್ಲೂ ಅವನಿಗೆ ಆ ಕರೆಯು ತನ್ನ ವೇಳಾಪಟ್ಟಿಗೆ ಹೊಂದುವಂತಿದ್ದರೆ ಮಾತ್ರ ಅದನ್ನು ಒಪ್ಪಿಕೊಳ್ಳುತ್ತಾನೆ.
ಒಬ್ಬನು ತನ್ನಿಚ್ಛೆಯಿಂದ, ಉದ್ದೇಶಪೂರ್ವಕವಾಗಿ, ಅಲ್ಲದೇ ತನ್ನ ಕೃತ್ಯದಿಂದ, ಸಾವಿನ ನಿರ್ದಾರಿತವಾದ ಸಮಯಕ್ಕಿಂತ ಮೊದಲೇ ಅದನ್ನು ಬರಮಾಡಿಕೊಳ್ಳುವುದೇ ಆತ್ಮನಾಶ ಅಥವಾ ಆತ್ಮಹತ್ಯೆ ಎನಿಸುತ್ತದೆ.
ಆತ್ಮನಾಶವು ನಾಲ್ಕು ಮಟ್ಟಗಳಲಿ ಕಾಣಬಹುದು:
1. ಮನದಲ್ಲಿ ಆತ್ಮನಾಶದ ಬಗೆಗೆ ಯೋಚನೆ ಉಂಟಾದರೂ ಆ ಯೋಚನೆಯನ್ನು ಕಾರ್ಯಗತಗೊಳಿಸದಿರುವುದು.
2. ಯೋಚನೆಯನ್ನು ಕಾರ್ಯಗತಗೊಳಿಸಿದರೂ ಅದು ಸಂಪೂರ್ಣವಾಗಬಹುದು ಇಲ್ಲವೇ ಆಗದೇ ಇರಬಹುದು.
3. ಅವಶ್ಯಕವಿದ್ದ ಕೃತಿಯನ್ನು ತಾನೇ ಕೈಗೊಳ್ಳಬಹುದು
ಹಾಗೂ
4. ತಾನೇ ಕೃತಿಯನ್ನು ಕೈಗೊಳ್ಳದೇ ಬೇರೊಬ್ಬನಿಗೆ ಸೂಚನೆಯನ್ನು ನೀಡಿ ಅವನಿಂದ ನಾಶವನ್ನು ಬರಮಾಡಿಕೊಳ್ಳುವುದು.
ಆತ್ಮಹತ್ಯೆ ಎಂಬ ಅರ್ಥದಿಂದ ಇನ್ನೂ ಹಲವಾರು ಪದಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಕೆಲವು ಪದಗಳನ್ನು ಗಮನಿಸೋಣ:
ಆತ್ಮಘಾತ, ಆತ್ಮತ್ಯಾಗ, ಆತ್ಮದಹನ, ಆತ್ಮದ್ರೋಹ, ಆತ್ಮನಾಶ, ಆತ್ಮಯಜ್ಞ, ಆತ್ಮವಧೆ, ಆತ್ಮಸಮರ್ಪಣೆ,
ಆತ್ಮಾರ್ಪಣೆ, ಪ್ರಾಣತ್ಯಾಗ, ಪ್ರಾಣದಾನ, ಪ್ರಾಣಯಜ್ಞ, ಪ್ರಾಣಹತ್ಯೆ, ಪ್ರಾಣಾಂತ, ಪ್ರಾಣಾರ್ಪಣೆ, ಪ್ರಾಣಾಹುತಿ, ಪ್ರಾಣೋತ್ಸರ್ಗ, ಪ್ರಾಣನಾಶ, ಪ್ರಾಣವಿಸರ್ಜನೆ, ದೇಹತ್ಯಾಗ, ದೇಹವಿಸರ್ಜನೆ, ದೇಹಾರ್ಪಣೆ, ದೇಹೋತ್ಸರ್ಗ ಮುಂತಾದವುಗಳು.
ಇವುಗಳಲ್ಲದೇ ಇನ್ನೂ ಕೆಲವು ಪದಗಳು ಬಳಕೆಯಲ್ಲಿವೆ - ಇಚ್ಛಾಮರಣ, ಸ್ವೇಚ್ಛಾಮರಣ, ಸ್ವಚ್ಛಂದ ಮರಣ. ಇವುಗಳಲ್ಲಿ ಸಾವನ್ನು ಗಮನಿಸಲಾದರೂ, ಕೃತ್ಯವನ್ನು ಯಾರು ಎಸಗಬೇಕೆಂಬುದು ಅರ್ಥವಾಗದು.
ಉಪವಾಸ, ಉಪೋಷಣ, ಜೋಹಾರ, ದಿವ್ಯ, ಬಲಿದಾನ, ಪರಲೋಕಗಮನ, ಪ್ರಯಾಣ, ಪ್ರಸ್ಥಾನ, ಪ್ರಾಯೋಪಗಮನ, ಪ್ರಾಯೋಪವೇಷನ, ಸತ್ಯಕ್ರಿಯೆ, ಸತಿ, ಸಂಲ್ಲೇಖನೆ, ಸ್ವರ್ಗಗಮನ, ಸ್ವರ್ಗಪ್ರಾಪ್ತಿ. ಈ ಪದಗಳಲ್ಲಿ "ಆತ್ಮ"ವೂ ಇಲ್ಲ, 'ಹತ್ಯೆ' ಯೂ ಇಲ್ಲ. ಅಲ್ಲದೇ ಯಾರು ಕೃತ್ಯವನ್ನು ಎಸಗಿದರೆಂಬುದು ಖಚಿತವಾಗಿ ನಿರ್ಧರಿಸಲಾಗುವುದಿಲ್ಲ. ಮತ್ತೊಂದು ನಾಣ್ನುಡಿಯೇನೆಂದರೆ "ತನ್ನ ಸಾವನ್ನು ತಾನಾಗಿಯೇ ತಂದುಕೊಳ್ಳುವುದು". ಇದನ್ನೂ ಕೂಡ ಆತ್ಮಹತ್ಯೆಯ ಅರ್ಥದಲ್ಲಿ ಬಳಸಲಾಗುತ್ತದೆ.
ಆತ್ಮಹತ್ಯೆ ಅಥವಾ ಆತ್ಮನಾಶ ಹಾಗೂ ಆತ್ಮಸಮರ್ಪಣೆ ಪದಗಳ ಅರ್ಥವನ್ನು ಸ್ವಲ್ಪ ಗಮನಿಸೋಣ:
"ತುಂಬಾ ಅಸಮಾಧಾನ, ಸೋಲಿನ ತೀವ್ರವಾದ ಅರಿವು, ಸಂಕಟಗಳ ಬೇಸರ, ನೆಮ್ಮದಿಯಾಗಿ ಬಾಳಲು ಸಾಧ್ಯವಿಲ್ಲದ ಭಾವನೆಗಳಿಂದಾಗಿ ಅತೀವ ಅತೃಪ್ತ ಮನಸ್ಥಿತಿಯಲ್ಲಿ , ಸಹಿಸಿಕೊಳ್ಳಲಾಗದ ತೀವ್ರ ಭಾವಾವೇಷದಲ್ಲಿ, ಬಲವಂತದಿಂದ ಜೀವ ತೆರುವವರ ಕೃತ್ಯವನ್ನು ಆತ್ಮಹತ್ಯೆ/ಆತ್ಮನಾಶ ಎಂದೆನ್ನಲಾಗುತ್ತದೆ".
ಆದರೆ "ತಮ್ಮ ಜೀವನದ ಕಾರ್ಯ, ಜೀವನದ ಗುರಿ, ಅದರ ಉದ್ದೇಶ, ಎಲ್ಲ ಬಗೆಯಲ್ಲೂ ಪೂರ್ತಿಗೊಂಡಿದೆಯೆಂಬ ಕೃತಕೃತ್ಯತೆಯ ಭಾವನೆಯಿಂದ ತಮ್ಮ ಐಹಿಕ ಅಸ್ತಿತ್ವವನ್ನು ತುಂಬು ಹರ್ಷದಿಂದ ಸಮಾಪ್ತಿಗೊಳಿಸುವವರ ಕೃತ್ಯವನ್ನು ಆತ್ಮಸಮರ್ಪಣೆ ಎನ್ನುತ್ತಾರೆ". ಇದಕ್ಕೆ ಕೆಲವು ಉದಾಹರಣೆಗಳೆಂದರೆ - ಆದಿ ಶಂಕರಾಚಾರ್ಯ, ಕುಮಾರಿಲ ಭಟ್ಟ, ಚೈತನ್ಯ ಮಹಾಪ್ರಭು, ಸಂತ ತುಕಾರಾಮ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ರಾಮದಾಸರುಗಳು.
ಸಾವು ನೈಸರ್ಗಿಕವಾಗಿ, ಅಪಘಾತದಿಂದ ಅಥವಾ ಆತ್ಮನಾಶದಿಂದಾದರೂ ಜೀವ ಹಾಗೂ ದೇಹಗಳು ಬೇರ್ಪಡುತ್ತವೆ. ಈ ಬೇರ್ಪಡುವ ಕ್ರಿಯೆಯು ನೈಸರ್ಗಿಕವಾಗಿ ಅಥವಾ ಅಪಘಾತದಿಂದಾದರೆ ಅದನ್ನು ಸಾವು, ನಿಧನ ಎನ್ನಬಹುದು. ಬೇಕೆಂದೇ ಬೇರೊಬ್ಬರಿಗೆ ಸಾವು ಬರುವಂತೆ ಮಾಡಿದರೆ ಅದನ್ನು ವಧೆ, ಹತ್ಯೆ, ಘಾತ ಎನ್ನಬಹುದು. ಆತ್ಮನಾಶದ ಕೃತ್ಯದಲ್ಲಿ ಪ್ರಾಣ ಹಾಗೂ ದೇಹಗಳನ್ನು ಬೇರ್ಪಡಿಸಲು ಎಸಗುವ ಪ್ರಯತ್ನಗಳು ದೇಹದ ಬಗೆಗೆ ಮಾತ್ರ ಇರುತ್ತದೆ, ಪ್ರಾಣದ ಬಗೆಗಲ್ಲ. ದೇಹವನ್ನುಳಿದು ಪ್ರಾಣಕ್ಕೆ ಬೇರೆ ಅಸ್ತಿತ್ವವಿಲ್ಲ. ಅದಿಲ್ಲದಿದ್ದರೆ ದೇಹವು ಕೇವಲ ಕಳೇಬರ, ಪ್ರೇತ ಎನಿಸುತ್ತದೆ. ದೇಹವೇ ಪ್ರಾಣಕ್ಕೆ ಆಧಾರ, ದೇಹ ಕೆಲಸಕ್ಕೆ ಬಾರದಂತಾಗುತ್ತಲೇ ಪ್ರಾಣಕ್ಕೆ ಅದನ್ನು ತೊರೆಯದೇ ಬೇರೆ ದಾರಿಯೇ ಇರುವುದಿಲ್ಲ.
ಬದುಕಬೇಕೆಂಬ ಇಚ್ಛೆ ಎಲ್ಲಕ್ಕೂ ಮೀರಿದ್ದು. ಆದರೆ ಕೆಲವು
ಕಾರಣಗಳಿಂದ ಬಾಳು ಬೇಡವಾಗುತ್ತದೆ. ಹೀಗಾಗಿ ಆತ್ಮನಾಶದ ಯೋಚನೆಗಳು ಬರಲು ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲೂ ಸಾಯುವ ಬಯಕೆ ಕ್ಷೀಣವಾದದ್ದು. ಅದು ಇರುವುದೇ ಇಲ್ಲವೆಂದರೂ ಸರಿಯೇ.
ಸಾಯಬೇಕೋ ಇಲ್ಲವೇ ಬದುಕಬೇಕೋ ಎಂಬುದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರಲಾಗುವುದೇ ಇಲ್ಲ. ಆಲೋಚನೆಗಳ ದೆವ್ವದ ಕುಣಿತ ಸಾಗುತ್ತಲೇ ಇರುತ್ತದೆ. ಇಬ್ಬಂದಿತನವು ಮನವನ್ನು ತುಂಬಿಬಿಡುತ್ತದೆ. ಬಾಳಬೇಕೆನ್ನಿಸುತ್ತಾದರೂ ಬಾಳುವುದು ಕಷ್ಟ. ಸಾಯಬೇಕೆನ್ನಿಸಿದರೂ ಸಾವಿನಾಚೆಯ ಅವಸ್ಥೆಯ ಭಯಂಕರವಾದ ಚಿತ್ರಗಳು ಕಣ್ಣೆದುರು ಹಾಯ್ದು ಹೋಗುತ್ತವೆ. ಸಾವಿನ ಹೊಸ್ತಿಲನ್ನು ದಾಟುವ ಬದಲು ಇದ್ದ ಪರಿಸ್ಥಿಯೊಂದಿಗೆ ಹೇಗೋ ಹೊಂದಿಕೊಳ್ಳಬಾರದೇಕೆ ಎಂದೂ ಅನಿಸತೊಡಗುತ್ತದೆ.
ಸಾಮಾನ್ಯವಾಗಿ ಆತ್ಮಹತ್ಯೆಯ ಸಂದರ್ಭಗಳಲ್ಲಿ ಹತ್ಯೆ ನಡೆಯಬೇಕೆಂದೇನೂ ಇಲ್ಲ. ಆದರೆ ನಾಶ ಎಂಬುದು ಖಂಡಿತ.
ಆತ್ಮನಾಶದ ಸಂದರ್ಭದಲ್ಲಿ ಪ್ರಾಣದ ಆಶ್ರಯಸ್ಥಾನವನ್ನೇ ನಾಶಪಡಿಸಲು ಪ್ರಯತ್ನಿಸಲಾಗುತ್ತದೆ. ಹೀಗಾಗುತ್ತಲೇ ಪ್ರಾಣವು ತನ್ನ ಆಶ್ರಯ ಸ್ಥಾನವನ್ನು ಕಳೆದುಕೊಂಡುಬಿಡುತ್ತದೆ.
ಪ್ರಾಣ ಪದದಿಂದ ಆರಂಭಗೊಳ್ಳುವ ಪ್ರಾಣತ್ಯಾಗದಂಥ ಸಮಾನ ಪದಗಳನ್ನು ಆತ್ಮನಾಶ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಸಾವು ನೈಸರ್ಗಿಕವಾಗಿ,ಅದಕ್ಕೆ ವಧೆ, ಅಪಘಾತದಿಂದ ಇಲ್ಲವೇ ಆತ್ಮನಾಶದಿಂದಾದರೂ ಜೀವ ಹಾಗೂ ದೇಹಗಳು ಬೇರ್ಪಡುತ್ತವೆ. ಈ ಬೇರ್ಪಡುವ ಕ್ರಿಯೆಯು ನೈಸರ್ಗಿಕವಾಗಿ ಇಲ್ಲವೇ ಅಪಘಾತದಿಂದಾದರೆ ಅದನ್ನು ಸಾವು, ನಿಧನ ಎಂದೆನ್ನಲಾಗುತ್ತದೆ. ಬೇಕೆಂದೇ ಬೇರೊಬ್ಬರಿಗೆ ಸಾವು ಬರುವಂತೆ ಮಾಡಿದರೆ ಅದಕ್ಕೆ ವಧೆ, ಹತ್ಯೆ, ಘಾತ ಎಂದೆನ್ನಲಾಗುತ್ತದೆ. ತನ್ನಿಚ್ಛೆಯಿಂದ, ಬೇಕೆಂದೇ, ತಾನೇ ಕೃತಿಗೈದು ಸ್ವಂತಕ್ಕೆ ಸಾವನ್ನು ತಂದುಕೊಂಡರೆ ಅದಕ್ಕೆ ಆತ್ಮನಾಶ ಎಂದು ಕರೆಯಲಾಗುತ್ತದೆ. ಆತ್ಮನಾಶದ ಕೃತ್ಯದಲ್ಲಿ ಪ್ರಾಣ ಹಾಗೂ ದೇಹಗಳನ್ನು ಬೇರ್ಪಡಿಸಲೆಂದು ಕೈಗೊಳ್ಳಲಾಗುವ ಯತ್ನಗಳು ಕೇವಲ ದೇಹದ ಬಗೆಗೆ ಮಾತ್ರ ಇರುತ್ತವೆ, ಪ್ರಾಣದ ಬಗೆಗಲ್ಲ. ಜೀವ, ಪ್ರಾಣ ಎಂದರೆ ಬಾಳಿಗೆ ಅತ್ಯವಶ್ಯಕವಾದ ಘಟಕ. ಆದರೆ ದೇಹವನ್ನುಳಿದು ಅದಕ್ಕೆ ತನ್ನದೇ ಆದ ಬೇರೊಂದು ಅಸ್ತಿತ್ವ ಇರುವುದಿಲ್ಲ. ಅದು ದೇಹದ ಅಸರೆಯಲ್ಲಿರುವಂಥದ್ದಾದರೂ ಅದಿಲ್ಲದಿದ್ದರೆ ದೇಹವು ನಿರ್ಜಿವ, ಕಳೇಬರ, ಪ್ರೇತ ಎನ್ನಿಸುತ್ತದೆ. ದೇಹಕ್ಕೆ ಪ್ರಾಣವೇ ಆಧಾರ, ದೇಹ ಕೆಲಸಕ್ಕೆ ಬಾರದಂತಾಗುತ್ತಲೇ ಅದನ್ನು ತೊರೆಯದೇ ಬೇರೆ ದಾರಿಯು ಪ್ರಾಣಕ್ಕೆ ಇರುವುದಿಲ್ಲ. ಆತ್ಮನಾಶದಲ್ಲಿ ಪ್ರಾಣದ ಆಶ್ರಯಸ್ಥಾನವನ್ನೇ ನಾಶಪಡಿಸಲು ಯತ್ನಿಸಲಾಗುತ್ತದೆ. ಹೀಗಾಗುತ್ತಲೇ ಪ್ರಾಣವು ತನ್ನ ಆಶ್ರಯ ಸ್ಥಾನವನ್ನು ಕಳೆದುಕೊಂಡು ಬಿಡುತ್ತದೆ.
ಅಗ್ನಿಪ್ರವೇಶದಿಂದ ದೇಹವು ಸುಟ್ಟು ಹೋಗುತ್ತದೆ. ಜಲಪ್ರವೇಶದಿಂದ ಅದು ಮುಳುಗುತ್ತದೆ. ಶಸ್ತ್ರಾಘಾತ, ವಿಷಸೇವನೆ, ನೇಣಿನಿಂದ ದೇಹವು ನಿರೂಪಯೋಗವಾಗುತ್ತದೆ. ಬೆಟ್ಟದ ಮೇಲಿನಿಂದ ಬಿದ್ದಾಗ ಅದು ಭಿನ್ನಗೊಳ್ಳುತ್ತದೆ. ಇವುಗಳೆಲ್ಲಾ ನಡೆಯುವುದು ಕೇವಲ ದೇಹಕ್ಕೆ ಮಾತ್ರ. ದೇಹ ಹಾಳಾಗುತ್ತಲೇ ಪ್ರಾಣವು ಅದನ್ನು ಬಿಡಲೇ ಬೇಕು.
ಜೀವವಿಲ್ಲದ ದೇಹ ಸ್ವಲ್ಪಕಾಲ ಉಳಿಯಬಲ್ಲದು. ಆದರೆ ದೇಹವಿಲ್ಲದೇ ಪ್ರಾಣ ಉಳಿಯಲಾರದು. ಪ್ರಯೋಗಶಾಲೆಗಳಲ್ಲಿ ದೇಹಗಳನ್ನು ದ್ರಾವಣಗಳಲ್ಲಿರಿಸಿ ದೀರ್ಘಕಾಲ ಕಾಪಾಡಲಾಗುತ್ತದೆ. ರಷಿಯಾ ದೇಶದ ನಾಯಕ ಲೆನಿನ್ನನ ದೇಹವನ್ನು ಹಲವಾರು ವರ್ಷಗಳವರೆಗೂ ಕಾಪಾಡಲಾಯಿತು. ರಾಮಾಯಣದಲ್ಲಿ ದಶರಥನ ಮೃತದೇಹವನ್ನು ಎಣ್ಣೆಯಲ್ಲಿ ಮುಳುಗಿಸಿ ಭರತನು ಮರಳಿ ಬರುವವರೆಗೂ ಕಾಪಾಡಲಾಯಿತು.
ದೇಹವಿಲ್ಲದಿದ್ದರೆ ಪ್ರಾಣದ ಅಸ್ತಿತ್ವವು ಅನುಭವಕ್ಕೆ ಬಾರದು. ಪ್ರಾಣವನ್ನೇ ನೇರವಾಗಿ ನಾಶಪಡಿಸಲಾಗದು. ಆದ್ದರಿಂದ ಪ್ರಾಣತ್ಯಾಗ, ಪ್ರಾಣನಾಶ, ಪ್ರಾಣದಾನ, ಪ್ರಾಣಾoತ, ಪ್ರಾಣಾಹುತಿ ಎಂಬುದಕ್ಕೆ ಅರ್ಥವಿಲ್ಲ. ಇದಕ್ಕೆ ತದ್ವಿರುದ್ಧವಾಗಿ ದೇಹತ್ಯಾಗ, ದೇಹವಿಸರ್ಜನೆ, ದೇಹಾರ್ಪಣೆ, ದೇಹೋತ್ಸರ್ಗ ಪದಗಳು ಅರ್ಥಪೂರ್ಣ. ಸಾವು ಬರುವುದೆಂದರೆ ದೇಹದಲ್ಲಿರುವ ಪ್ರಾಣ, ಬುದ್ಧಿ, ಮನಸ್ಸುಗಳ ಶಕ್ತಿಗಳು ತಾವು ಆಶ್ರಯ ಹೊಂದಿದ ದೇಹವನ್ನು ತೊರೆಯುವುದು.
ಅನುಮರಣ, ಇಚ್ಛಾಮರಣ, ವೇದನಾರಹಿತ ಮರಣ ಪದಗಳಲ್ಲಿ ನಾಶವನ್ನು ನಿರ್ದೇಶಿಸುವ ಮರಣ ಪದವಿದ್ದರೂ ಆತ್ಮ, ಸ್ವ ಎಂಬ ಅರ್ಥದ ಪದವಿರುವುದಿಲ್ಲ.
ಆತ್ಮನಾಶಕ್ಕೆ ಕಾರಣಗಳು ಹಲವಾರು ಹಾಗೂ ಕೆಲವು ಸಂದರ್ಭಗಳಲ್ಲಿ ವಿಚಿತ್ರವೆನಿಸುವುದು. ಪ್ರತಿಯೊಂದು ಆತ್ಮನಾಶದ ಘಟನೆಗಳೂ ತನ್ನದೇ ಆದ ಕಾರಣವಿರುತ್ತದೆ. ಅದರ ಹಿನ್ನೆಲೆ, ಉದ್ದೇಶಗಳು ಭಿನ್ನ, ಕೌಟುಂಬಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಜೀವನ ವಿಧಾನಗಳಲ್ಲಿ ಪ್ರತಿದಿನ ಹೊಸ ಸಮಸ್ಯೆಗಳು ಉದ್ಬವವಾಗುತ್ತವೆ. ಆತ್ಮನಾಶಕ್ಕೆ ಬಹು ಮುಖ್ಯ ಕಾರಣಗಳೆಂದರೆ ನಿರಾಶೆ, ವೈಫಲ್ಯ, ಅಪೇಕ್ಷಾಭಂಗ, ಸಂಶಯ, ಅಪಮಾನ; ಇವುಗಳಿಂದ ಉದ್ಭವಿಸುವ ಅಸಹ್ಯ ವೇದನೆ, ಇರುಸುಮುರುಸು, ವಿಕೃತಿಗಳು. ಈ ಎಲ್ಲ ಸಮಸ್ಯೆಗಳಿಗೆ ಹೋಲಿಸಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವುದು ಅಂತಹ ದೊಡ್ಡ ಸಮಸ್ಯೆಯೇನಲ್ಲ. ಆದರೆ ಅದರಿಂದಲೇ ಕುಸಿದು ಹಲವಾರು ವಿದ್ಯಾರ್ಥಿಗಳು ಪ್ರತಿ ವರ್ಷವೂ ಆತ್ಮನಾಶ ಮಾಡಿಕೊಳ್ಳುತ್ತಾರೆ. ಹಣಕಾಸಿನ ಸಮಸ್ಯೆ, ಚಿಂತೆ, ನೌಕರಿ ಸಿಗದಿರುವುದು ಅಥವಾ ದಿಢೀರನೆ ಕಳೆದುಕೊಳ್ಳುವುದು, ಆಹಾರ, ಬಟ್ಟೆ ಬರೆ, ಅಸರೆಗಳ ಕೊರತೆ, ಘಾತ - ಅಪಘಾತ, ತೀವ್ರ ಖಾಯಿಲೆ, ಕುಟುಂಬ ಮತ್ತು ವೈವಾಹಿಕ ಸಮಸ್ಯೆಗಳು, ವಿರಹ, ಪ್ರೇಮಭಂಗಗಳಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲರಾದಾಗ ಆತ್ಮನಾಶದ ಯೋಚನೆಯು ಬರುತ್ತದೆ. ಇವೆಲ್ಲ ಕಾರಣಗಳು ಹೆಂಗಸು ಹಾಗೂ ಗಂಡಸರಿಗೂ ಅನ್ವಯಿಸುವುದು. ಹೆಂಗಸರಿಗೆ ತಮ್ಮದೇ ಆದ ಕಾರಣಗಳಿವೆ. ಅತ್ತೆ-ಮಾವಂದಿರ ಕಾಟ, ಗಂಡನಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ, ವರದಕ್ಷಿಣೆ, ಬಂಜೆತನ, ಅವಮಾನ, ಸೇಡು, ಶೀಲವನ್ನು ಸಂದೇಹಿಸುವುದು ಹಾಗೂ ಇನ್ನೂ ಅನೇಕ ಕಾರಣಗಳು ಸ್ತ್ರೀಯರನ್ನು ಆತ್ಮನಾಶದ ದಾರಿಗೆ ತಳ್ಳುತ್ತವೆ.
ಆತ್ಮನಾಶದ ಕಾರಣಗಳಂತೆಯೇ ಅದರ ಉದ್ದೇಶಗಳೂ ಹಲವು. ಸಹಿಸಲಾಸಾಧ್ಯದ ಪರಿಸ್ಥಿಯಿಂದ ಹೊರಬರುವುದೇ ಆತ್ಮನಾಶದ ಮುಖ್ಯ ಗುರಿ. ಆದರೂ ಪ್ರತಿಯೊಂದು ಸಂದರ್ಭಗಳಲ್ಲೂ ಗುರಿ ಬೇರೆ ಬೇರೆಯೇ ಇರುತ್ತವೆ. ಅಪರಾಧಕ್ಕೆ ಪಶ್ಚಾತ್ತಾಪ, ಶಿಕ್ಷೆಯ ಭಯ, ಅವಮಾನ, ಆತ್ಮಗೌರವಕ್ಕೆ ಧಕ್ಕೆ ಬರಬಹುದೆಂಬ ಭಯ, ಅವಹೇಳನದ ಭಯ, ಪ್ರಿಯ ವ್ಯಕ್ತಿಯ ಅಗಲಿಕೆಯ ದುಃಖ, ಜೀವನದಲ್ಲಿನ ಜಿಗುಪ್ಸೆ, ಶೀಲಕ್ಕೆ ಅಂಟಿದ ಕಳಂಕ, ಕಾಮವಾಸನೆಯ ಅತೃಪ್ತಿ, ಹಾಗೂ ಇದೇ ಬಗೆಯ ಹಲವಾರು ಉದ್ದೇಶಗಳಿಗಾಗಿ ಅತ್ನನಾಶವನ್ನು ಕೈಗೊಳ್ಳಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಆತ್ಮನಾಶಕ್ಕೆ ಕಾರಣಗಳೇ ತಿಳಿದುಬರುವುದಿಲ್ಲ. ಕೆಲವು ಬಾರಿ ಆತ್ಮನಾಶಕ್ಕೆ ಕಾರಣ ಹಾಗೂ ಗುರಿ ಒಂದೇ ಆಗಿರಬಹುದು. ತಮ್ಮ ಬಂಧು ಬಳಗದವರ ಚಿರ ಅಗಲಿಕೆಯಿಂದ ಬಾಳುವುದು ಅಸಾಧ್ಯವೆನಿಸಿ, ಅದರಿಂದ ಉಂಟಾಗುವ ದುಃಖದಿಂದ ಬಿಡುಗಡೆಹೊಂದಲು ಹಲವರು ಆತ್ಮನಾಶದ ದಾರಿಯನ್ನು ಅನುಸರಿಸುತ್ತಾರೆ.
ವಿಜ್ಞಾನವು ಮಾನವನ ಅನುಕೂಲಗಳಿಗಾಗಿ ಹಲವಾರು ಸಾಧನಗಳನ್ನು ಒದಗಿಸಿದೆ. ಆದರೆ ಅವುಗಳನ್ನು ತಪ್ಪಾಗಿ ಬಳಸಿಕೊಂಡ ಕಾರಣ ಇಂದು ಆತ್ಮನಾಶವು ಸಹಜವೂ, ಸಂಭವವೂ ಆಗಿಬಿಟ್ಟಿದೆ. ಕೀಟನಾಶಕಗಳು, ನಿದ್ರೆ ಗುಳಿಗೆಗಳು, ಹಗ್ಗಗಳು, ಕೆಲವು ಉದಾಹರಣೆಗಳು.
ವಿಶ್ವದ ಬಹುತೇಕ ಧರ್ಮಗಳು ಆತ್ಮನಾಶವನ್ನು ನಿಷೇಧಿಸಿದೆ. ಅದು ನಿಸರ್ಗಕ್ಕೆ ವಿರೋಧಿಯದುದು. "ಜಾತಸ್ಯ ಹಿ ಧೃವೋ ಮೃತ್ಯು" ಹುಟ್ಟಿದವರೆಲ್ಲಾ ಸಾಯಲೇ ಬೇಕು. ಅದಕ್ಕಾಗಿ ಯತ್ನಿಸಬೇಕಿಲ್ಲ.
ಹಿಂದೂ ಧರ್ಮವು ಆತ್ಮನಾಶವನ್ನು ತಪ್ಪೆಂದಿದೆ. ಋಗ್ವೇದದಲ್ಲಿ ಆತ್ಮನಾಶದ ಕುರಿತು ಉಲ್ಲೇಖವಿಲ್ಲ. ಸತಿ ಪದ್ಧತಿಯಬ್ಬು ನಿಷೇಧಿಸಲಾಗಿದೆ. ಬ್ರಾಹ್ಮಣ ಹಾಗೂ ಸಂಹಿತೆಗಳು ಸತಿಗೆ ಅನುಕೂಲವಲ್ಲ. ಬ್ರಾಹ್ಮಣ ಗ್ರಂಥದ ಎರಡು ಉಲ್ಲೇಖಗಳು ಮಾತ್ರ ಆತ್ಮನಾಶಕ್ಕೆ ಪೋಷಕ ಎನ್ನಿಸುವಂತಿದೆ. ಎಲ್ಲ ಬಗೆಯ ಯಜ್ಞಗಳಿಗಿಂತ ಆತ್ಮಯಜ್ಞವು ಶ್ರೇಷ್ಠವಾದುದೆಂದು ನಂಬಲಾಗಿದ್ದು ಬೇಗನೆ ಸಾವು ಬರಲೆಂದು ಸರ್ವಸಂಗಪರಿತ್ಯಾಗ ಹಾಗೂ ವನವಾಸಗಳನ್ನು ಉಪಾಯಗಳೆಂದು ಸೂಚಿಸಲಾಗಿದೆ. ಪ್ರಾಯೋಪವೇಶನ, ಪವಿತ್ರ ನದಿಗಳ ಸಂಗಮ, ತೀರ್ಥಕ್ಷೇತ್ರಗಳಲ್ಲಿ, ಸಾವನ್ನು ತಂದುಕೊಳ್ಳುವುದು, ಜಗನ್ನಾಥನ ರಥದಡಿ ಬಿದ್ದು ದೇಹವನ್ನರ್ಪಿಸುವುದು, ಭವಾನಿಯೆದುರು ಕತ್ತನ್ನು ಕುಯ್ದುಕೊಳ್ಳುವುದು, ಪವಿತ್ರ ಪರ್ವತ ಶಿಖರಗಳಿಂದ ಕಣಿವೆಗೆ ಹಾರಿಕೊಳ್ಳುವುದು ಮುಂತಾದುವುಗಳನ್ನು ಪುರಾಣಕಾಲದಲ್ಲಿ ತಪ್ಪೆನ್ನಲಾಗಿಲ್ಲ.
ಬೌದ್ಧಧರ್ಮದಲ್ಲಿ ಆತ್ಮನಾಶಕ್ಕೆ ಸ್ಥಾನವಿಲ್ಲ. ಆ ಧರ್ಮದ ಪ್ರಕಾರ ಮಾನವನು ತನ್ನ ಪಾಲಿಗೆ ಬಂದ ಬದುಕನ್ನು ಬಂದಂತೆಯೇ ಸ್ವೀಕರಿಸಬೇಕು. ಆತ್ಮನಾಶದಿಂದ ನಿರ್ವಾಣ ಸಿಗಲಾರಸು. ಹಾಗೆಯೇ ಪೂರ್ವ ಜನ್ಮದ ಪಾಟಕಗಳೂ ನಾಶವಾಗದು. ಆತ್ಮನಾಶವು ಬೌದ್ಧ ಧರ್ಮದಲ್ಲಿ ಕೊಲೆಯೆಂದೇ ಪರಿಗಣಿಸಲಾಗುತ್ತದೆ. ಬೌದ್ಧರ ಅಭಿಪ್ರಾಯದಂತೆ ಬಾಯಾರಿಕೆ (ತೃಷ್ಣೆ) ಎರಡು ಬಗೆಯದು. ಭವತೃಷ್ಣೆ ಎಂದರೆ ಬದುಕುವ ಬಯಕೆ. ವಿಭವ ತೃಷ್ಣೆ ಎಂದರೆ ಬದುಕದೇ ಇರುವ ಅಂದರೆ ಸಾಯುವ ಬಯಕೆ. ಇವೆರಡನ್ನೂ ಒಪ್ಪುವುದಿಲ್ಲ. ಆತ್ಮನಾಶದಿಂದ ಆಧ್ಯಾತ್ಮಿಕ ಉನ್ನತಿಯಿಲ್ಲ. ಆದರೆ ಆತ್ಮ ನಾಶವು ಪುನರ್ಜನ್ಮವು ಬೌದ್ಧ ಧರ್ಮದಲ್ಲೇ ದೊರಕಲೆಂಬ ಉದ್ದೇಶದಿಂದ ಮಾಡಿಕೊಂಡಲ್ಲಿ ಅದಕ್ಕೆ ಒಪ್ಪಿಗೆಯಿದೆ. ಆದರೆ ಆತ್ಮನಾಶವು ಮಹಾಯಾನದ ಪ್ರಕಾರ ಶ್ರೇಷ್ಠವಾದ ಆತ್ಮಯಜ್ಞ. ದೇಗುಲದಲ್ಲಿ ದೀಪವನ್ನು ಉರಿಸುವುದಕ್ಕಿಂತಲೂ ದೇಹವನ್ನೇ ಉರಿಸುವುದು ಹೆಚ್ಚು ಪುಣ್ಯದ ಕೆಲಸ. ಇದೇ ರೀತಿ ದಾನವೆಂದು ಭಿಕ್ಷೆಯನ್ನು ನೀಡುವುದಕ್ಕಿಂತ ದೇಹವನ್ನೇ ದಾನವಾಗಿ ನೀಡುವುದನ್ನು ಉತ್ತಮವೆಂದು ಮನ್ನಿಸಲಾಗಿದೆ.
ಜೈನ ಧರ್ಮವು ಕೂಡಾ ಆತ್ಮನಾಶವನ್ನು ನಿಷಿದ್ಧವೆಂದು ಪರಿಗಣಿಸುತ್ತಾರೆ. ಆದರೆ ಉಪವಾಸದಿಂದ ಸಾವನ್ನು ಆಹ್ವಾನಿಸುವುದನ್ನು ಸೂಕ್ತವೆಂದು ಒಪ್ಪುತ್ತದೆ. ಉಪವಾಸದಿಂದ ಆತ್ಮಶುದ್ಧಿ ಸಾಧ್ಯವೆಂದು ಜೈನರು ತಿಳಿಯುತ್ತಾರೆ. ಉಸಿರಾಟದ ಸಂಯಮದಿಂದ ಮನಸ್ಸಿನ ಪಾಪ, ಉಪವಾಸದಿಂದ ದೈಹಿಕ ಪಾಪ ಹಾಗೂ ಇಂದ್ರಿಯ ದಮನದಿಂದ ಹುಟ್ಟಿಕೊಳ್ಳುವ ಪಾಪಗಳು ನಾಶಹೊಂದುವವೆಂದು ಜೈನ ಧರ್ಮದ ನಂಬಿಕೆ. "ಅಚಾರಾಂಗ ಸೂತ್ರ" ಎಂಬ ಹೊತ್ತಿಗೆಯಲ್ಲಿ ಆತ್ಮಾರ್ಪಣಕ್ಕೆ ಅನುಕೂಲತೆಯನ್ನು ತೋರಲಾಗಿದೆ. ಸಾವನ್ನು ಸೆಳೆದುಕೊಳ್ಳುವುದನ್ನಾಗಲಿ, ಅದು ಬೇಗ ಬರಲೆಂದು ಯತ್ನಿಸುವುದನ್ನಾಗಲಿ ಜೈನ ಧರ್ಮವು ನಿಷೇಧಿಸುತ್ತದೆ. ಸಾವನ್ನು ತನ್ನ ಹತ್ತಿರಕ್ಕೆ ತಂದುಕೊಳ್ಳುವುದಕ್ಕಿಂತ ತಾನೇ ಅದರ ಹತ್ತಿರಕ್ಕೆ ಹೋಗುವುದು ಒಳ್ಳೆಯದೆನ್ನಲಾಗಿದೆ. ಉಪವಾಸದಿಂದ ಸಾವಿನ ಬಳಿ ಹೋಗುವುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸಂಲ್ಲೇಖನದಲ್ಲಿ ಈ ಬಗೆಯ ಯತ್ನವಿರುವ ಕಾರಣ ಈ ಧರ್ಮವು ಅದನ್ನು ಮನ್ನಿಸಿದೆ.
ಮುಸಲ್ಮಾನರು ಆತ್ಮನಾಶವನ್ನು ದೇವನಿಗೆ ಬಗೆದ ದ್ರೋಹವೆಂದು ಕಾಣುತ್ತಾರೆ. ಆತ್ಮನಾಶ ಮಾಡಿಕೊಳ್ಳುವವರು ಕುರಾನ್ ಹಾಗೂ ಪ್ರೇಷಿತರನ್ನು (ಸುನ್ನಾಹ) ಉಲ್ಲಂಘಿಸುತ್ತಾರೆ. ಕುರಾನ್ ನಲ್ಲಿ ಆತ್ಮನಾಶವನ್ನು ನಿಷೇಧಿಸುವ ಬಗೆಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲಾನ ಅಪ್ಪಣೆ ಇಲ್ಲದೇ ಬೇಕೆಂದೇ ಆತ್ಮನಾಶವನ್ನು ಮಾಡುವುದು ಸೂಕ್ತವಲ್ಲ ಎನ್ನಲಾಗಿದೆ.
ಇನ್ನೊಬ್ಬರಿಂದ ತಮಗೆ ಸಾವು ಬರುವುದಕ್ಕಿಂತ ಅದನ್ನು ತಾವೇ ಬರಮಾಡಿಕೊಳ್ಳುವುದು ಸೂಕ್ತವೆಂದು ಈಜಿಪ್ಟಿನ ಜನಗಳ ನಂಬಿಕೆ. ಬಡತನದಿಂದಾಗಿ ಆತ್ಮನಾಶ ಮಾಡಿಕೊಳ್ಳುವುದು ಸಮರ್ಥನೀಯವೆಂದು ಹೋಮರನ ಅನಿಸಿಕೆ.
ಗ್ರೀಕ್ ಕಾವ್ಯಗಳಲ್ಲಿ ಆತ್ಮನಾಶಗಳು ಉದಾತ್ತವಾದ ಉದ್ದೇಶಗಳಿಗಾಗಿ ನಡೆದರೆ ಅದು ವಿರೋಚಿತವೆನ್ನಿಸಿದೆ. ಆತ್ಮನಾಶ ತಪ್ಪಲ್ಲವೆಂಬುದು ಗ್ರೀಕರ ಅಭಿಪ್ರಾಯ. ಎಥೆನಿಯನ್ ಸ್ತ್ರೀಯರು ಆತ್ಮನಾಶಕ್ಕೆ ಹೇಂಲೋಕ್ (Hemlock) ಎಂಬ ವಿಷಪೂರಿತ ವನಸ್ಪತಿಯನ್ನು ಬಳಸುತ್ತಿದ್ದರು. ಕಣಿಗಳ ಹೂಗಿಡದ ಬೇರುಗಳನ್ನು ಆತ್ಮನಾಶಕ್ಕೆ ಬಳಸಿಕೊಳ್ಳುತ್ತಿದ್ದರೆಂಬ ಉಲ್ಲೇಖವಿದೆ. ಸ್ತ್ರೀಯರು ಆತ್ಮನಾಶವನ್ನು ವಿರೋಧಿಸುತ್ತಿದ್ದರು. ಆತ್ಮನಾಶಗೊಂಡ ಕಲೇಬರದ ಅಂತ್ಯಸಂಸ್ಕಾರ, ಪ್ರಾರ್ಥನೆ ಮುಂತಾದವುಗಳನ್ನು ಮಾಡಲಾಗುತ್ತಿರಲಿಲ್ಲ.
ಭಾರತದ ದಂಡವಿಧಾನದಲ್ಲಿ ಆತ್ಮನಾಶವನ್ನೆಸಗುವ ಹಾಗೂ ಅವನಿಗೆ ನೆರವಾಗುವ, ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ ಸೂಕ್ತ ಶಿಕ್ಷೆಯನ್ನು ಸೂಚಿಸುತ್ತದೆ. ಆತ್ಮನಾಶವು ಯಶಸ್ವಿಯಾದರೆ ಅಪರಾಧವಲ್ಲ. ಆತ್ಮನಾಶಕ್ಕೆ ಯತ್ನಿಸುವುದು ಅಪರಾಧ.
ಪುರಾಣಕಾಲದಲ್ಲಿ ಸಾಮೂಹಿಕ ಆತ್ಮನಾಶವನ್ನು ಅಪರಾಧವೆಂದು ಪರಿಗಣಿಸಲಾಗುತ್ತಿರಲಿಲ್ಲ. ಇಂಥ ಸನ್ನಿವೇಶಗಳಲ್ಲಿ ಹಲವಾರು ಜನಗಳು ಸಾಮೂಹಿಕ ಆತ್ಮನಾಶ ಕೃತ್ಯವನ್ನು ವೀಕ್ಷಿಸಲು ಹಾಜರಿರುತ್ತಿದ್ದರು. ಆದರೆ ಯಾರೂ ಈ ಕೃತ್ಯವನ್ನು ವಿರೋಧಿಸುತ್ತಿರಲಿಲ್ಲ. ಬದಲಿಗೆ ಅವರೆಲ್ಲಾ ಅದನ್ನು ಒಂದು ಗೌರವಾರ್ಹ ಕೃತಿ ಎಂದು ತಿಳಿಯುತ್ತಿದ್ದರು. ರಾಮಾಯಣದಲ್ಲಿ ರಾಮನು ಸರಯೂ ನಡೆಯೆಡೆಗೆ ತನ್ನ ಜೀವನದ ಪಯಣವನ್ನು ಅಂತ್ಯಗೊಳಿಸಲು ಹೊರಟಾಗ ಅವನೊಂದಿಗೆ ಆಯೋಧ್ಯೆಯ ಅನೇಕ ನಾಗರಿಕರೂ ಆತ್ಮನಾಶ ಮಾಡಿಕೊಂಡರು. ಮಹಾಭಾರತದಲ್ಲಿ ಕೃಷ್ಣನ ಅವತಾರ ಸಮಾಪ್ತಿಯಾದ ನಂತರ ಅವನ ಹದಿನಾರು ಸಾವಿರ ಮಡದಿಯರು ಜಲಪ್ರವೇಶ ಹಾಗೂ ಐವರು ಅಗ್ನಿಪ್ರವೇಶ ಕೈಕೊಂಡರು. ವಸುದೇವನ ನಾಲ್ವರು ಮಡದಿಯರು ಸತಿ ಹೋದರು. ವ್ಯಾಸನ ಹೇಳಿಕೆಯ ಪ್ರಕಾರ ಕುರುವಂಶದ ಅನೇಕ ಮಹಿಳೆಯರು ಗಂಗೆಯಲ್ಲಿ ತಮ್ಮ ದೇಹಗಳನ್ನು ವಿಸರ್ಜಿಸಿದರು. ಇವೆಲ್ಲ ಘಟನೆಗಳನ್ನು ಅಪರಾಧಗಳೆಂದು ಪರಿಗಣಿಸದೇ ಅವುಗಳನ್ನು ಆಗಿನ ಸಂದರ್ಭಗಳಲ್ಲಿ ಕೊಂಡಾಡಲಾಯಿತು. ಆ ಕಾಲದಲ್ಲಿ ಇಂಥಹ ಕೃತಿಗಳಿಗೆ ಸಮಾಜ ಹಾಗೂ ಧರ್ಮವು ಮನ್ನಣೆ ನೀಡಿದ್ದೇ ಇದಕ್ಕೆ ಕಾರಣ.
ರಾಮಾಯಣದ ಸೀತೆಯ ಅಗ್ನಿದಿವ್ಯವು ಚಿಂತನೆಗೆ ಒಳಪಡಬೇಕಾದ ಒಂದು ಸಂಗತಿ. ಅವಳನ್ನು ಬಿಟ್ಟರೆ ರಾಮಾಯಣ-ಮಹಾಭಾರತದಗಳಲ್ಲಿ ಬೇರೆ ಯಾರೂ ಅಗ್ನಿದಿವ್ಯವನ್ನು ಕೈಗೊಂಡಿಲ್ಲ. ಆತ್ಮನಾಶದ ಸಂದರ್ಭದ ಅಗ್ನಿದಿವ್ಯವನ್ನು ಮಾತ್ರ ಇಲ್ಲಿ ಸ್ಮರಿಸಬಹುದು. ರಾಮನಿಗೆ ಸೀತೆಯ ಶೀಲದ ಬಗೆಗೆ ಎಳ್ಳಷ್ಟೂ ಅನುಮಾನವಿಲ್ಲದಿದ್ದರೂ ಎಲ್ಲರೆದುರಿಗೂ ಸಹಿಸಲಾಗದ, ಶೋಭಿಸದ ಮಾತುಗಳಲ್ಲಿ ಸಂದೇಹವನ್ನು ವ್ಯಕ್ತಪಡಿಸಿದುದು ಸೀತೆಗೆ ಅಪಾರ ದುಃಖ ನೀಡಿತು ಹಾಗೂ ಮನಸ್ಸಿಗೆ ಸಹಿಸಲಸಾಧ್ಯವಾದ ಪೆಟ್ಟು ಬಿತ್ತು. ಅವಳು ತತ್ತರಿಸಿಹೋದಳು. ಅವಳನ್ನು ಅಗ್ನಿದಿವ್ಯವನ್ನು ಕೈಗೊಳ್ಳಬೇಕೆಂದು ರಾಮನೇನು ಸೂಚಿಸಿರಲಿಲ್ಲ. ಅದು ಅವಳ ಸ್ವಯಂ ತೀರ್ಮಾನವಾಗಿತ್ತು.
ಆತ್ಮನಾಶಕ್ಕೆಂದು ಕೈಕೊಳ್ಳಲಾಗುವ ಅಗ್ನಿಪ್ರವೇಶ ಹಾಗೂ ಅಗ್ನಿದಿವ್ಯಗಳು ಬೇರೆಯೇ ಆದ ಸಂಗತಿಗಳು. ಇವೆರಡೂ ಒಂದಕ್ಕೊಂದು ವಿರೋಧದವು. ಅಗ್ನಿಯೊಂದಿಗಿನ ಸಂಬಂಧವು ಇವೆರಡಕ್ಕೂ ಸಮಾನವಾದುದು. ಸತ್ಯವನ್ನು ಸಿದ್ಧಪಡಿಸಲೆಂದು ತನ್ನ ಸರ್ವಸ್ವವನ್ನೇ ಪಣಕ್ಕೊಡ್ಡಲಾಗುತ್ತದೆ. ದಿವ್ಯದಿಂದ ಯಶಸ್ವಿಯಾಗಿ ಹೊರಬರುವನೆಂಬ ಆತ್ಮವಿಶ್ವಾಸವಿದ್ದು ನಡೆಸುವ ಕೃತ್ಯ ಅಗ್ನಿದಿವ್ಯ. ಈ ಕೃತಿಯಲ್ಲಿ ಸೋತರೆ ಸಾವು, ಆತ್ಮನಾಶ ಖಂಡಿತ. ಆದರೆ ಸಾವು, ಆತ್ಮನಾಶವು ದಿವ್ಯದ ಗುರಿಯಲ್ಲ. ಆತ್ಮನಾಶವು ತನ್ನ ಗುರಿಯಿಂದ ನಿರ್ಧಾರಿತವಾದರೆ ದಿವ್ಯವು ತನ್ನ ಪರಿಣಾಮದಿಂದ ಸಿದ್ಧವಾಗುತ್ತದೆ. ಆತ್ಮನಾಶದಲ್ಲಿ ವ್ಯಕ್ತಿಯು ಸಾವಿಗೆ ಶರಣಾಗುತ್ತಾನೆ. ಅಗ್ನಿದಿವ್ಯದಲ್ಲಿ ಮೃತ್ಯಂಜಯನೆನ್ನಿಸುವ ವಿಜಯದ ಭಾವನೆ ಇರುತ್ತದೆ. ಆತ್ಮನಾಶಕ್ಕಾಗಿ ಎಸಗುವ ಅಗ್ನಿಪ್ರವೇಶವು ದುರ್ಬಲತೆಯದ್ದು ಹಾಗೂ ಹೇಡಿತನದ್ದಾದರೆ ಅಗ್ನಿದಿವ್ಯವು ಸಾವಿಗೆಸೆದ ಸವಾಲೆನಿಸುತ್ತದೆ.
ದಿವ್ಯದಲ್ಲಿ ಹತ್ತು ಬಗೆಗಳಿವೆ. ಅವುಗಳೆಂದರೆ - ಅಗ್ನಿ, ತುಲಾ, ಜಲ, ವಿಷ, ಕೋಶ, ತಂದುಳ, ತಪ್ತಮಾಷ, ಫಾಲ, ಧರ್ಮಾಧರ್ಮ, ಹಾಗೂ ತುಲಸಿ. (ಮೂಲ - ಮೋನಿಯರ್ ವಿಲಿಯಮ್ಸ್, ಸಂಸ್ಕೃತ-ಇಂಗ್ಲಿಷ್ ಕೋಶ).
ಸೀತೆಯು ತಾನು ನಿಷ್ಕಳಂಕಳೆಂದು ಸಿದ್ಧಪಡಿಸಲು ಅಗ್ನಿದಿವ್ಯವನ್ನೇ ಏಕೆ ಆಯ್ಕೆಮಾಡಿಕೊಂಡಳು? ಇದು ಅವಳು ಬೇಕೆಂದೇ ಮಾಡಿಯೇ ಆಯ್ಕೆಯೆ? ಈ ಆಯ್ಕೆ ಮಾಡಿಕೊಳ್ಳುವಾಗ ಅವಳು ಮಾಡಿದ ಪ್ರಾರ್ಥನೆಯನ್ನೂ ಗಮನಿಸಬೇಕು. ಸೀತೆಗೆ ಅಗ್ನಿಯ ಸಾಮರ್ಥ್ಯ ಹಾಗೂ ಗುಣಧರ್ಮಗಳ ಬಗೆಗೆ ಸರಿಯಾದ ಅರಿವಿತ್ತು. ಅಗ್ನಿಯು ಸರ್ವಸಾಕ್ಷಿ ಹಾಗೂ ಸರ್ವ ಭಕ್ಷಕವಾಗಿರುವಂತೆಯೇ ಪಕ್ಷಪಾತರಹಿತವಾದದ್ದು, ಶುದ್ಧಾಶುದ್ಧಿಯ ವಿಶೇಷವುಳ್ಳದ್ದು. ಈ ಕಾರಣಕ್ಕೆ ಸೀತೆಯು ಬೇರೆ ದಿವ್ಯಗಳ ಬದಲಾಗಿ ಅಗ್ನಿದಿವ್ಯವನ್ನೇ ಆಯ್ದುಕೊಂಡಳು. ಅದರಲ್ಲಿ ಮತ್ತೊಂದು ಉದ್ದೇಶವೂ ಕಂಡುಬರುವುದು. ಅದೇನೆಂದರೆ ಅಗ್ನಿಯ ಗುಣಗಳಿಂದಾಗಿ ಅವಳಿಗೆ ಅದರ ಬಗೆಗೆ ಅಪಾರವಾದ ಗೌರವ ಭಾವನೆ ಇತ್ತು. ಅಗ್ನಿಯಿಂದಲೇ ತನಗೆ ನ್ಯಾಯವು ದೊರೆಯುತ್ತದೆಂಬ ಶ್ರದ್ಧೆ ಅವಳದ್ದು. ಅಗ್ನಿ ಸಾಕ್ಷಿಯನ್ನು ಸರ್ವಶ್ರೇಷ್ಟವೆಂದು ಸದಾಕಾಲವೂ ಪರಿಗಣಿಸಲಾಗಿದೆ. ತನ್ನ ಪಾತಿವ್ರತ್ಯದ ಬಗೆಗೆ ಅವಳಿಗೆ ಹೆಮ್ಮೆ ಅನ್ನಿಸುವಂತೆಯೇ ಅಗ್ನಿಯ ಗುಣಧರ್ಮಗಳ ಬಗ್ಗೆ ಅಲಕ್ಷ್ಯವನ್ನೂ ತೋರಿಲ್ಲ. ತನ್ನ ಮಡಿಲಿಗೆ ಬಿದ್ದ ಎಲ್ಲವನ್ನೂ ಸುಟ್ಟು ಬೂದಿಯನ್ನಾಗಿ ಮಾಡುವ ಅದರ ಗುಣ ಅವಳಿಗೆ ತಿಳಿದಿತ್ತು. ಅಗ್ನಿಯು ಆಹುತಿಯ ಸ್ವರೂಪ, ಗುಣಧರ್ಮಗಳನ್ನು ಗಮನಿಸುವುದಿಲ್ಲ. ಹೆಣ್ಣು-ಗಂಡು, ಪತಿವ್ರತೆ-ಕುಲಟೆ ಎಂಬ ವ್ಯತ್ಯಾಸ ಅದಕ್ಕಿಲ್ಲ ಎಂಬುದು ಸೀತೆಗೆ ತಿಳಿದಿತ್ತು. ಹೀಗಾಗಿ ತಾನೊಬ್ಬಳು ಪತಿವ್ರತೆ ಎಂಬ ಕಾರಣಕ್ಕಾಗಿ ಅಗ್ನಿಯು ತನ್ನ ಬಗ್ಗೆ ತಾರತಮ್ಯವನ್ನು ತೋರಬಹುದೆಂಬ ಭ್ರಮೆ ಅವಳಲ್ಲಿರಲಿಲ್ಲ. ಆದರೆ ಅವಳು ಅಗ್ನಿಯ ಶುದ್ಧಾಶುದ್ಧತೆಯ ವಿವೇಕದ ಬಗೆಗೆ ಶ್ರದ್ಧೆಯನ್ನಿರಿಸಿಕೊಂಡ ಕಾರಣ ಅದು ತನ್ನ ಚಾರಿತ್ರ್ಯಕ್ಕೆ ಅಂಟಿಸಲಾದ ಕಳಂಕವನ್ನು ಸುಟ್ಟು, ಹೋಗಲಾಡಿಸಿ, ಅದರ ಶುದ್ಧ ಸ್ವರೂಪವನ್ನು ಪ್ರಕಟಿಸಿಯೇ ತೀರುತ್ತದೆಂಬ ಖಾತ್ರಿಯು ಅವಳಲ್ಲಿತ್ತು. ವಸ್ತುಮಾತ್ರಕ್ಕೆ ಹುಟ್ಟಿನಿಂದ ಬಂದ ಇಲ್ಲವೇ ನಂತರ ಬಂದ ಕಳಂಕಗಳನ್ನು ನಾಶಪಡಿಸಿ ಅದರ ಶುದ್ಧ ಸ್ವರೂಪವನ್ನು ಪ್ರಕಟಿಸುವುದೇ ಅಗ್ನಿಯ ಅನನ್ಯ ಸಾಧಾರಣವಾದ ವೈಶಿಷ್ಟ್ಯವು. ಇದೇ ಅವಳಿಗೆ ಆಧಾರವನ್ನೊದಗಿಸಿತು.
ಅಗ್ನಿಯು ಸರ್ವಭಕ್ತನೆಂದು ತಿಳಿದೂ ಕೂಡಾ ಅವಳು ಪ್ರಾರ್ಥಿಸಿದುದು ತನ್ನ ರಕ್ಷಣೆಗಾಗಿ. ಅಗ್ನಿಯು ಅವಳಿಗಂಟಿದ ಕಳಂಕವನ್ನು ಭಕ್ಷಿಸಿ ಆ ಕಳಂಕದಿಂದ ತನ್ನನ್ನು ಕಾಪಾಡಲೆಂದಷ್ಟೇ ಅವಳು ನಿರೀಕ್ಷಿಸಿದ್ದು.
ಅವಳಿಗೆ ಬೇಡದೇಇದ್ದದ್ದು ಕಳಂಕ ಮಾತ್ರ. ಪಾತೀವ್ರತ್ಯವು ಒಂದು ಶ್ರೇಷ್ಠಮಟ್ಟದ ಸದ್ಗುಣವೆನಿಸಿದ್ದು ಸೀತೆಯಲ್ಲಿ ಅದು ಇದ್ದಿತೆಂಬ ಬಗೆಗೆ ಯಾವುದೇ ಸಂದೇಹವಿಲ್ಲ. ಆದರೆ ಇದರಿಂದಾಗಿ ಅವಳಿಗೆ ಬೆಂಕಿಯ ಝಳ ತಕುಪಾಲಿಲ್ಲವೆಂಬ ನಂಬಿಕೆ ಮಾತ್ರ ಒಂದು ಭ್ರಮೆ. ಪಾತಿವ್ರತ್ಯ ಓಂದು ಅದ್ಭುತ ಸಾಮರ್ಥ್ಯವಾಗಿದ್ದರೆ ರಾವಣ ಅವಳನ್ನು ಸ್ಪರ್ಶಿಸುತ್ತಲೇ ಅವನ ಕೈ ಬೆರಳುಗಳು ಉದುರಿ ಬೀಳಬೇಕಿತ್ತು. ಕೊನೆಯ ಪಕ್ಷ ಅವನಲ್ಲಿ ಮೈ ನಡುಕವಾದರೂ ಆಗಬೇಕಿತ್ತು. ಆದರೆ ಹಾಗೇನೂ ಆಗಲಿಲ್ಲ.
ಅಗ್ನಿದಿವ್ಯದ ಸರಿಯಾದ ಸ್ವರೂಪವನ್ನು ತಿಳಿದುಕೊಂಡರೆ ಪವಾಡ ತಾನಾಗಿಯೇ ಕಣ್ಮರೆಯಾಗುತ್ತದೆ. ಮಕ್ಕಳಿಂದ ಮುದುಕರವರೆಗೂ ಜನಜಂಗುಳಿ ಅಲ್ಲದೆ ದೇವಾನುದೇವತೆಗಳು, ಗಂಧರ್ವರು ಸೀತೆಯು ಅಗ್ನಿಯನ್ನು ಪ್ರವೇಶಿಸುವುದನ್ನು ಕಂಡರಂತೆ, ಅಂದರೆ ಸೀತೆಯು ಅಗ್ನಿಸಾಕ್ಷಿಯಾಗಿ ತನ್ನ ಶುದ್ಧತೆ ಹಾಗೂ ಪಾತಿವ್ರತ್ಯತೆಗಳ ಮೇಲೆ ಆನೆ ಇಟ್ಟು ಹೇಳಿದಳು ಎಂದು ಅರ್ಥ. ಬೆಂಕಿಗೆ ಹಾರಿಕೊಂಡರೆ ಅದು ತಗಲುವುದು ಖಚಿತ. ಸೀತೆ ಬೆಂಕಿಗೆ ಹಾರಿಕೊಂಡರೆ ಸುಟ್ಟು ಊಣಲಾಗದೇ ಹೊರಬರಲು ಸಾಧ್ಯವೇ ಇರಲಿಲ್ಲ. ಆಣೆ ಮಾಡುವುದರಿಂದ ಶುದ್ಧತೆ ಲಭಿಸುತ್ತದೆಂದು ಅಂದಿನ ಸಮಾಜ ನಂಬಿತ್ತು. ನೇರ ಮಾತಿನಲ್ಲಿ ಹೇಳುವುದಾದರೆ ಸೀತೆಯು ಬೆಂಕಿಗೆ ಹಾರಿಕೊಳ್ಳದೆ ಅದನ್ನು ಸಾಕ್ಷಿಯಾಗಿರಿಸಿ ಆಣೆಯನ್ನು ಉಚ್ಚರಿಸಿದ್ದಳಷ್ಟೆ.
ರಾಮಾಯಣ - ಮಹಾಭಾರತ ಕಾಲದ ಆತ್ಮನಾಶ ಹಾಗೂ ಇಂದಿನ ಕಾಲದ ಆತ್ಮನಾಶಗಳನ್ನು ಹೋಲಿಸಲು ಬರುವುದಿಲ್ಲ. ವ್ಯಕ್ತಿಗತವಾದ ಆತ್ಮನಾಶಗಳ ಗುರಿಗಳಲ್ಲಿ ಸ್ವಲ್ಪಮಟ್ಟಿನ ಸಾಮ್ಯತೆ ಕಂಡುಬಂದರೂ ಅವುಗಳ ಕಾರಣ, ಬಳಸಿಕೊಳ್ಳುವ ವಿಧಾನಗಳಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಸೀತೆಯ ಅಪವಾದ ಒಂದನ್ನು ಬಿಟ್ಟರೆ ಬೇರೆ ಯಾವ ಹೆಂಗಸೂ ಶೀಲದ ಬಗ್ಗೆ ವ್ಯಕ್ತಪಡಿಸಲಾದ ಸಂದೇಹದಿಂದಾಗಿ ಆತ್ಮನಾಶವನ್ನು ಎಸಗಿಲ್ಲ. ವರದಕ್ಷಿಣೆಗಾಗಿ ಬಲಿ, ಅತ್ತೆ ಮನೆಯಲ್ಲಿನ ಕಾಟ, ಬಡತನ, ಹಸಿವು, ಸಾಲಗಳಂತಹ ಆತ್ಮನಾಶದ ಕಾರಣಗಳು ರಾಮಾಯಣ-ಮಹಾಭಾರತದ ಸಮಯದಲ್ಲಿ ಕಂಡುಬಂದಿಲ್ಲ. ಇಂದು ಸಾಮೂಹಿಕ ಆತ್ಮನಾಶಗಳು ಅತಿ ವಿರಳವೆಂದರೂ ಸರಿ. ರಾಮಾಯಣದ ವಾನರರು ಹಾಗೂ ಪ್ರಜೆಗಳ ಆತ್ಮನಾಶಗಳ ಸಂಖ್ಯೆಯು ವಿಶ್ವದ ಒಂದು ದಾಖಲೆ.
@@@@@@@@@@@
ಮೂಲ: ರಾಮಾಯಣ - ಮಹಾಭಾರತಗಳಲ್ಲಿ ಆತ್ಮಹತ್ಯೆ ಕೃತಿಯಿಂದ ಆಯ್ದ ಭಾಗಗಳ ಸಾರಾಂಶ
No comments:
Post a Comment