Friday, 8 March 2019

ಪುಸ್ತಕ ಪರಿಚಯ - ಎರಡು ತಲೆಮಾರು



ಪುಸ್ತಕ ಪರಿಚಯ

ಪುಸ್ತಕದ ಹೆಸರು: ಎರಡು ತಲೆಮಾರು
ಸಂಪಾದಕರು : ಶ್ರೀ.ಅರವಿಂದ ಚೊಕ್ಕಾಡಿ
ಪ್ರಕಾಶಕರು : ಚಾಣಕ್ಯ ಪ್ರಕಾಶನ
                    ಮಲಘನ ಬಿಲ್ಡಿಂಗ್
                    ಮೀನಾಕ್ಷಿ ಚೌಕ್
                    ವಿಜಾಪುರ - 586101
ಪುಟ ಸಂಖ್ಯೆ : 393
ಮೊದಲ ಮುದ್ರಣ : ಆಕ್ಟೊಬರ್ 2009

ಪ್ರತಿಯೊಂದು ತಲೆಮಾರು ಕೂಡ ತನ್ನ ಹಿಂದಿನ ತಲೆಮಾರಿನೊಂದಿಗೆ ಸಾಮ್ಯತೆಯನ್ನೂ, ಭಿನ್ನತೆಯನ್ನೂ ಹೊಂದಿರುತ್ತದೆ. ಒಂದು ಶತಮಾನದ ಹಿಂದಕ್ಕೆ ಹೋದರೆ ಎರಡು ಮೂರು ತಲೆಮಾರುಗಳಲ್ಲಿ ಕಂಡು ಬರುತ್ತಿದ್ದಂತಹ ಭಿನ್ನತೆಗಳು ಈಗ ಒಂದೆರಡು ವರ್ಷಗಳ ವಯಸ್ಸಿನ ಅಂತರದಲ್ಲೇ ಕಂಡುಬರುತ್ತದೆ. ಭಿನ್ನತೆ ಮತ್ತು ಸಾಮ್ಯತೆಗಳು ಏನೇ ಇದ್ದರೂ ಅಂತಃಪ್ರವಾಹವಾಗಿ ಇರುವ ಸಂಬಂಧದ ಸೂಕ್ಷ್ಮತೆಗಳು, ಪ್ರೀತಿ ವಾತ್ಸಲ್ಯದ ಸಿಂಚನಗಳು ಹಾಗೆಯೇ ಮುಂದುವರೆದಿದೆ.

ತೀರಿಕೊಂಡ ತಮ್ಮ ತಂದೆಯ ನೆನಪಿಗಾಗಿ ಶ್ರೀ.ಅರವಿಂದ ಚೊಕ್ಕಾಡಿಯವರು ಸಂಪಾದಿಸಿರುವ ಈ ಪುಸ್ತಕವು ಅತ್ಯಂತ ವಿಶಿಷ್ಟ ಬಗೆಯದ್ದು. ನಮ್ಮ ಅನೇಕ ಕವಿಗಳು ಬಾಲ್ಯವನ್ನು ಬಾಳಸಂಪುಟದ ಮಧುರ ಗೀತ ಎಂದು ಕರೆದಿದ್ದಾರೆ. ಬಾಲ್ಯದ ದಿನಗಳು ದೂರವಾದಂತೆಲ್ಲ ದೂರದ ಬೆಟ್ಟದಂತೆ ಅತ್ಯಂತ ಭಾವಪ್ರಧಾನದಂತೆ ಕಾಣುವ ಸಂಭವವೇ ಅಧಿಕ. ನಮ್ಮ ಶ್ರೇಣೀಕೃತ ಸಮಾಜದಲ್ಲಿ ನಾವು ಹುಟ್ಟಿದ ಮನೆ, ಕುಟುಂಬ, ಊರುಗಳ ಪರಿಸರಗಳು ವಿಭಿನ್ನವಾಗಿರುವುದರಿಂದ, ನಮ್ಮ ಬಾಲ್ಯದ ಅಧಿದೇವತೆಗಳಾದ ತಾಯಿ ಮತ್ತು ತಂದೆಯರ ನೆರಳುಗಳು ನಮ್ಮನ್ನು ಒಂದಲ್ಲಾ ಒಂದು ನೆಲೆಯಲ್ಲಿ ತಿಳಿದೋ ತಿಳಿಯದೆಯೋ ಕಾಡುತ್ತಲೇ ಇರುತ್ತವೆ. ಸೃಜನಶೀಲರಿಗಂತೂ ಈ ನಂಟು ಸುಂದರ ಕನಸಾಗಿಯೋ ಪೀಡಿಸುವ ಘಟನೆಗಳಾಗಿಯೋ ಗಂಟು ಬೀಳುವುದು ಸಹಜವೇ. ಒಮ್ಮೊಮ್ಮೆ ಈ ಗಂಟು ಕಗ್ಗಂಟಾಗಿ ನಮ್ಮ ಅಸ್ತಿತ್ವದ, ಅಸ್ಮಿತೆಯ ಹುಡುಕಾಟಕ್ಕೂ ಪ್ರಚೋದನೆ ನೀಡಬಹುದು.

ಶ್ರೀ ಚೊಕ್ಕಾಡಿಯವರು ತಮ್ಮ ತಂದೆಯವರು ಅವರ 63ನೇ ವರ್ಷದಲ್ಲಿ ತೀರಿಕೊಂಡ ನಂತರ ಅವರ ನೆನಪಿನಲ್ಲಿಇಲ್ಲದ ತೀರಎಂಬ ಪುಸ್ತಕವನ್ನು ಬರೆದರು. ಅನಂತರ ಅವರು ತಮ್ಮ ತಂದೆಯವರ ನೆನಪಿಗಾಗಿ ವಿಭಿನ್ನವಾಗಿ ಯೋಚಿಸಿ 63 ಲೇಖಕರನ್ನು ಸಂಪರ್ಕಿಸಿ ಅವರಿಂದ, “ತಮ್ಮ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ತಾಯಿ-ತಂದೆಯರ ಪಾತ್ರಎಂಬುದರ ಬಗ್ಗೆ ಪ್ರಾತಿನಿಧಿಕ ಲೇಖನವನ್ನು ಬರೆದು ಕೊಡಬೇಕೆಂದು ಬಿನ್ನವಿಸಿಕೊಂಡರು. ಕಾರಣಾಂತರಗಳಿಂದ ಕೆಲವು ಲೇಖಕರಿಗೆ ಇದು ಸಾಧ್ಯವಾಗದೇ 57 ಲೇಖನಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ಇದರಲ್ಲಿ ಮೂರ್ನಾಲ್ಕು ಲೇಖನಗಳು ತಾಯಿ ತಂದೆಯರ ಕುರಿತು ಆರಾಧನಾ ಭಾವವನ್ನು ವ್ಯಕ್ತಪಡಿಸುವುದಾಗಿತ್ತು.

57 ಲೇಖನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಲೇಖನಗಳು ನಮ್ಮ ಮನಸ್ಸನ್ನು ನಾಟುತ್ತವೆ ಹಾಗೂ ಈ ಮೂಲಕ ಲೇಖನಗಳನ್ನು ಬರೆದ ವ್ಯಕ್ತಿಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ನಮಗೆ ಸಹಾಯವಾಗುತ್ತದೆ. ಅಲ್ಲದೆ,
ಮಕ್ಕಳನ್ನು ನಿರ್ವಹಿಸುವ ತಾಯಿ ತಂದೆಯರಿಗೆ ಯಾವ ರೀತಿ ನಿರ್ವಹಿಸಿದರೆ ಅದರ ಪರಿಣಾಮಗಳು ಯಾವ ರೀತಿ ಇರುತ್ತವೆ ಎಂದು ಸಾಪೇಕ್ಷವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಹಾಗೂ ಕಿರಿಯರಿಗೆ ತಾವು ತಮ್ಮ ಹಿರಿಯರನ್ನು ಅರ್ಥಮಾಡಿಕೊಳ್ಳಲು ಕೆಲವು ಹೊಳಹುಗಳು ಸಿಗುತ್ತವೆ.

ಲೇಖನವನ್ನು ಬರೆದವರುಗಳ ಪೈಕಿ ಕೆಲವರೆಂದರೆ :-
ಡಾ.ಅರವಿಂದ ಮಾಲಗತ್ತಿ
ಡಾ.ಚೆನ್ನವೀರ ಕಣವಿ
ಡಾ.ಧರಣಿದೇವಿ ಮಾಲಗತ್ತಿ
ಶ್ರೀ.ಎಚ್.ಡುಂಡಿರಾಜ್
ಗೌರೀ ಲಂಕೇಶ್
ಪ್ರೊ.ಡಿ.ಜವರೇ ಗೌಡ
ಡಾ.ಕಮಲಾ ಹಂಪನಾ
ಪಿ.ಲಂಕೇಶ್
ನಾ.ಡಿಸೋಜ
ನಾಡೋಜ ಪ್ರೊ.ಹಂಪನಾ
ನೇಮಿಚಂದ್ರ, ಇತ್ಯಾದಿ

ಒಟ್ಟಾರೆ ಜೀವನ ಸನ್ನಿವೇಶಗಳಲ್ಲಿ ಆಗುವ ಪರಿವರ್ತನೆಗಳಲ್ಲಿ ತಲೆಮಾರುಗಳ ಮುಖಾಮುಖಿಯ ಪಾತ್ರವನ್ನು ಅರ್ಥೈಸಲು ನೆರವಾಗಬೇಕೆಂಬ ಕಲ್ಪನೆಯನ್ನು ಸಾಧಿಸಲುಎರಡು ತಲೆಮಾರುಸಹಾಯ ಮಾಡುತ್ತದೆ ಹಾಗೂ ಇಲ್ಲಿ ಬರೆದಿರುವ ಲೇಖಕ ಲೇಖಕಿಯರಿಗೆ ತಮ್ಮ ತಾಯಿ ತಂದೆಯರಿಗೆ ನುಡಿ-ನಮನಗಳನ್ನು ಸಲ್ಲಿಸಲು ಒಂದು ವೇದಿಕೆಯಾಗಿಯೂ ಈ ಪುಸ್ತಕ ಕೆಲಸಮಾಡಿದೆ. ಕೊನೆಯದಾಗಿ ಈ ಪುಸ್ತಕವನ್ನು ಓದುವ ಸಹೃದಯರಿಗೂ ತಮ್ಮ ತಂದೆ-ತಾಯಿಯರಿಂದ ತಮಗೆ ಒದಗಿದ ಪ್ರೀತಿ ವಾತ್ಸಲ್ಯಗಳ ಸಿಂಚನ ಹಾಗೂ ಸಂಬಂಧದ ಸೂಕ್ಷ್ಮತೆಗಳನ್ನು ದಾಖಲಿಸಲಿ ಪ್ರೇರೇಪಣೆಯಾಗಬಹುದು.

No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...