ಒತ್ತಡ ನಿರ್ವಹಣೆ - ಒಂದು ವಿಶ್ಲೇಷಣೆ
ಮನುಷ್ಯನಲ್ಲಿ ಒತ್ತಡದ
ಸಮಸ್ಯೆಯು ಸರ್ವೇ ಸಾಮಾನ್ಯ. ಬಹುತೇಕ ಜನಗಳು ಒತ್ತಡದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಹಾಗಾಗಿ ಈ ಒತ್ತಡವನ್ನು ನಿರ್ವಹಿಸುವ ವಿಧಾನವನ್ನು ಕಂಡು ಕೊಳ್ಳಬೇಕಿದೆ. ಒತ್ತಡವನ್ನು ನಿರ್ವಹಿಸಲು ಯಾವುದೇ ಯಾಂತ್ರಿಕ ತಂತ್ರಗಳು ಇಲ್ಲ. ಈ ತರನಾದ ಯಾಂತ್ರಿಕ ತಂತ್ರಗಳನ್ನು ಕೇವಲ ಯಂತ್ರಗಳಿಗೆ ಮಾತ್ರ
ಉಪಯೋಗಿಸಬಹುದೇ ಹೊರತು ಅವುಗಳನ್ನು ಮನುಷ್ಯರಿಗೆ ಉಪಯೋಸಲಾಗದು.
ಮೊದಲಿಗೆ ಒತ್ತಡದ ಹಿಂದಿರುವ
ಸಮಸ್ಯೆಗಳನ್ನು ಗುರುತಿಸಬೇಕು. ಒತ್ತಡವು ಪ್ರಾರಂಭವಾಗುವುದು ಹಸಿವಿನ ಸಮಸ್ಯೆಗಳಿಂದ. ಹೇಗೆ ನಮ್ಮ ದೇಹಕ್ಕೆ ಹಸಿವನ್ನು ಹೋಗಲಾಡಿಸಿಕೊಳ್ಳಲು ಆಹಾರದ
ಅಗತ್ಯವೋ ಹಾಗೆಯೇ ನಮ್ಮ ಬೌದ್ಧಿಕತೆಗೆ ಆಹಾರವು ಅಗತ್ಯ. ನಮ್ಮಲ್ಲಿ ಯಾವಾಗ ಒತ್ತಡವು ಪ್ರಾರಂಭವಾಗುತ್ತದೋ ಆಗ ನಮಗೆ ಅನುಭವವಾಗುವುದೇನೆಂದರೆ
ಬೌದ್ಧಿಕ ಅಥವಾ ಆಧ್ಯಾತ್ಮಿಕ ಹಸಿವು.
ಬೈಬಲ್ ನಲ್ಲಿ ಭಗವಂತನನ್ನು
ಪ್ರಾರ್ಥಿಸುವ ಪ್ರಾರ್ಥನೆಯಲ್ಲಿ “ಓ ಯೇಸುವೇ, ನಮಗೆ ಈ ದಿನದ ಆಹಾರವನ್ನು
ಕರುಣಿಸು” (ಮ್ಯಾಥ್ಯೂ 6:11) ಎಂಬ ಬೇಡಿಕೆ ಬರುವುದು.
ಸ್ವಯಂ ತರಬೇತಿಯ ಪ್ರಾರಂಭಿಕ
ಹಂತದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಈ ಪದಗಳು ಸೂಚಿಸುತ್ತವೆ. ಇದು ನಮ್ಮ ಆಧ್ಯಾತ್ಮಿಕ ಹಸಿವನ್ನು ನಿವಾರಿಸಿಕೊಳ್ಳಲು ಮೊದಲು
ಆಹಾರವನ್ನು ನೀಡಬೇಕೆಂದು ಸೂಚಿಸುತ್ತದೆ. ಮೊದಲು ನಾವು ಆಧ್ಯಾತ್ಮಿಕ ಆಹಾರವನ್ನು ನಮ್ಮ ದೈನಂದಿನ ಅನುಭವದಿಂದ ಹೇಗೆ ಉತ್ಪಾದಿಸುವುದು
ಎಂಬುದನ್ನು ಕಂಡುಹಿಡಿದನಂತರವೇ ಆಧ್ಯಾತ್ಮಿಕ ಹಸಿವನ್ನು ನಿವಾರಿಸಿಕೊಳ್ಳಲು ಸಾಧ್ಯ.
ಪ್ರಕೃತಿಯಲ್ಲಿ ಜೇನು
ಹುಳುಗಳು ಹೇಗೆ ಹಲವಾರು ಹೂವುಗಳಿಂದ ಮಧುವನ್ನು ಹೀರಿ ಅದರಿಂದ ತಮಗೆ ಬೇಕಾದ ಆಹಾರವನ್ನು ಉತ್ಪಾದಿಸುವುದು
ಎಂಬುದನ್ನು ತೋರಿಸುತ್ತದೆ. ಹಾಗೆಯೇ ಮನುಷ್ಯನು ಪ್ರತಿಯೊಂದು ದೈನಂದಿನ ಅನುಭವಗಳನ್ನು ಎದುರಿಸುತ್ತಿದ್ದಂತೆ ತನಗೆ ಬೇಕಾದ
ಆಧ್ಯಾತ್ಮಿಕ ಮಧುವನ್ನು ಕಂಡುಕೊಳ್ಳುತ್ತಾನೆ. ಈ ಮಧುವನ್ನು ಪ್ರತಿನಿತ್ಯದ ಅನುಭವಗಳನ್ನು ಎದುರಿಸುತ್ತಾ ಉತ್ಪಾದಿಸಬೇಕು. ಹಾಗೆ ಮಾಡದಿದ್ದಲ್ಲಿ ನಾವು ಆಧ್ಯಾತ್ಮಿಕ ಹಸಿವಿನಿಂದ ಬಳಲಬೇಕಾಗುತ್ತದೆ.
ಉದಾಹರಣೆಗೆ ನೀವು ಒಂದು
ಕಛೇರಿಯಲ್ಲಿ ಕೆಲಸಮಾಡುತ್ತಿದ್ದಾಗ ಕಛೇರಿಯಲ್ಲಿ ನೀವು ನಿಮ್ಮನ್ನು ಉಳಿದವರನ್ನು ನೋಡುವುದಕ್ಕಿಂತ
ಬೇರೆ ರೀತಿಯಲ್ಲಿ ನೋಡುತ್ತಿರುವರೆಂದು ನಿಮಗೆ ಅನಿಸಬಹುದು. ಇದರ ಬಗ್ಗೆ ನೀವು ಆಳವಾಗಿ ಆಲೋಚಿಸಿದಾಗ ನಿಮಗೆ ಅನಿಸುವುದೇನೆಂದರೆ
ನೀವು ಎದುರಿಸುತ್ತಿರುವ ಸಂದರ್ಭವು ಭೇದಭಾವದಿಂದಾಗಿರದೇ ಗುಣಮಟ್ಟದ ಅಭಾವದಿಂದಾಗಿರುತ್ತದೆ. ಅಂದರೆ ನಿಮ್ಮ ಕಛೇರಿಯಲ್ಲಿ ಅನುಸರಿಸಬೇಕಾದ ಗುಣಮಟ್ಟದ ಕೊರತೆಯಿಂದಾಗಿ
ಮಾತ್ರವೇ ಹೊರತು ಭೇದಭಾವದಿಂದಲ್ಲ. ಈ ರೀತಿ ಕಾರಣಗಳನ್ನು ಕಂಡುಕೊಳ್ಳುವುದೇ ಮಧುವನ್ನು ಉತ್ಪಾದಿಸುವ ಹಂತ. ಒಮ್ಮೆ ಮಧುವನ್ನು ಉತ್ಪಾದಿಸಿದಿರೆಂದರೆ ನಂತರ ಸಕಾರಾತ್ಮಕವಾಗಿ
ಚಿಂತಿಸುವ ಮಾರ್ಗವು ಗೋಚರಿಸುತ್ತದೆ.
ಅನಂತರ ನೀವು ಗುಣಮಟ್ಟವನ್ನು
ಸುಧಾರಿಸುವುದರ ಕಡೆಗೆ ಗಮನ ಕೊಡಲು ಪ್ರಾರಂಭಿಸುತ್ತೀರ ಹಾಗೂ ಅನಂತರ ಭೇದಭಾವು ನಿಮಗೆ ಗೋಚರಿಸುವುದಿಲ್ಲ.
ಜನಗಳು ಸಾಮಾನ್ಯವಾಗಿ
ಸ್ವಯಂ-ಕೇಂದ್ರಿತ ಪ್ರಪಂಚದಲ್ಲಿ
ಯಾವಾಗಲೂ ಜೀವಿಸುತ್ತಿರುತ್ತಾರೆ. ಅವರಿಗೆ ಕೇವಲ ತಮ್ಮ ಬಗೆಗೆ ಮಾತ್ರ ಗೊತ್ತಿರುತ್ತದೆ ಆದರೆ ಬೇರೆಯವರ ಬಗ್ಗೆ ಅರಿವೂ ಇರುವುದಿಲ್ಲ
ಹಾಗೂ ತಿಳಿದುಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ಅತಿ ಮಹತ್ವವನ್ನು ನೀಡುತ್ತಾರೆ ಹಾಗೂ ಬೇರೆಯವರನ್ನು
ಕಡೆಗಾಣಿಸುತ್ತಾರೆ. ಈ ವಿಧದ ಭೇಧಭಾವನೆಯಿಂದ
ಕೂಡಿದ ಆಲೋಚನೆಯು ಒತ್ತಡವನ್ನು ಉಂಟುಮಾಡುತ್ತದೆ. ಈ ವಿಧದ ಭೇದಭಾವನೆಯ ಯೋಚನೆಯಿಂದ ಹೊರಬಂದು ವಾಸ್ತವಿಕ ವಿಧಾನವನ್ನು ಅನುಸರಿಸಿದಾದಲ್ಲಿ ನೀವು
ಖಂಡಿತವಾಗಿ ಒತ್ತಡರಹಿತ ಜೀವನವನ್ನು ಅನುಭವಿಸಬಹುದು.
ಸಾಮಾನ್ಯವಾಗಿ ಒತ್ತಡವು
ಉಂಟಾಗುವುದು ಹಿಂದಿನ ವೈಫಲ್ಯಗಳಬಗ್ಗೆ ಚಿಂತಿಸಿದಾಗ ಅಥವಾ ಭವಿಷ್ಯದ ಬಗ್ಗೆ ಕೊರಗಿದಾಗ. ತುಂಬಾ ಸುಲಭವಾದ ಪರಿಹಾರವೆಂದರೆ ಹಿಂದಿನ ವೈಫಲ್ಯಗಳನ್ನು ಮರೆಯುವುದು; ಭವಿಷ್ಯದಲ್ಲಿ ಹುಟ್ಟಿಕೊಳ್ಳಬಹುದಾದ ಸಮಸ್ಯೆಗಳ ಬಗ್ಗೆ ಈಗಲೇ
ಚಿಂತಿಸುವುದರ ಬದಲು ಅದು ಉತ್ಪತ್ತಿಯಾದಾಗ ಮಾತ್ರ ಅದಕ್ಕೆ ಸೂಕ್ತ ಪರಿಹಾರಗಳಬಗ್ಗೆ ಯೋಚಿಸಿದರೆ ಒಳಿತು. ಬಹಳ ಸಮಯದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಎದುರಾಗದೇ
ಇರಬಹುದು; ಆದ್ದರಿಂದ ಅದರ ಬಗ್ಗೆ
ಈಗಲೇ ಯೋಚಿಸಿ ಕೊರಗುವ ಅಗತ್ಯವಿಲ್ಲ.
ವಿದ್ಯಾರ್ಥಿಯೊಬ್ಬ
ತಾನು ಎದುರಿಸಿದ ಪರೀಕ್ಷೆಯ ಫಲಿತಾಂಶದ ಬಗ್ಗೆ ಮೊದಲೇ ವಿಪರೀತವಾಗಿ
ಯೋಚಿಸಿ ಅಧಿಕ ಒತ್ತಡದಿಂದಾಗಿ ಅವನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಫಲಿತಾಂಶ ಬಂದಾಗ ಅವನು ಉತ್ತಮ ದರ್ಜೆಯಲ್ಲೇ ಪಾಸಾಗಿದ್ದ. ಈ ಸಂದರ್ಭದಲ್ಲಿ ಅವನಿಗೆ ಜೇನಿನ ಮಧುವು ಕಾಯುತ್ತಿತ್ತು; ಅದರ ಬಗ್ಗೆ ಮುಂಚಿತವಾಗಿ ಯೋಚಿಸುವ ಬದಲು ಅದನ್ನು ಅನುಭವಿಸಲು
ಅವನು ಕಾಯಬೇಕಿತ್ತಷ್ಟೆ.
ಒತ್ತಡವನ್ನು ಬೌದ್ಧಿಕ
ಹಸಿವಿಗೆ ಹೋಲಿಸಬಹುದು. ಈ ಬೌದ್ಧಿಕ ಹಸಿವನ್ನು ಹೋಗಲಾಡಿಸಲು ಆಹಾರವನ್ನು ನೀಡುವ ಕಲೆಯನ್ನು ಕಂಡುಕೊಂಡರೆ ಯಾವ ಸಂದರ್ಭದಲ್ಲೂ
ಒತ್ತಡದ ಸಮಸ್ಯೆಯನ್ನು ಎದುರಿಸಬೇಕಾಗುವುದಿಲ್ಲ.
ಮೂಲ: ಮೌಲಾನಾ ವಹಿದುದ್ದೀನ್ ಖಾನ್. ಕನ್ನಡದಲ್ಲಿ - ಗುರುಪ್ರಸಾದ್.
No comments:
Post a Comment