Friday, 8 March 2019

ಕಾಲಭೈರವನ ವಾಹನ ಶ್ವಾನ


ಕಾಲಭೈರವನ ವಾಹನ ಶ್ವಾನ

ಹಿಂದೂ ಪುರಾಣದ ಪ್ರಕಾರ, ನಾಯಿಯು ಒಂದು ಅಶುಭಸೂಚಕವಾದ ಪ್ರಾಣಿಯು ಹಾಗೂ ಇದನ್ನು ಜನಗಳು ಮದುವೆ ಮಂಟಪ ಮತ್ತು ಪವಿತ್ರ ಸ್ಥಳಗಳಿಂದ ದೂರವಿಡುವರು. ಊಳಿಡುವ ನಾಯಿಯು ದುರದೃಷ್ಟದ ಮುನ್ಸೂಚನೆಯನ್ನು ನೀಡುವುದು. ಹಾಗೆ ನೋಡಿದರೆ ಕೆಲವರಿಗೆ ನಾಯಿಯನ್ನು ಕಂಡರೆ ಅದು ದುರದೃಷ್ಟವನ್ನು ತಂದುಕೊಡುವುದೆಂಬ ನಂಬಿಕೆ. ಯಾಕೆ ಹೀಗೆ? ಸಾಮಾನ್ಯವಾಗಿ ನಾಯಿಗಳು ಪ್ರೀತಿಪಾತ್ರವಾದ ಪ್ರಾಣಿ ಹಾಗೂ ಅತ್ಯಂತ ವಿಶ್ವಾಸಾರ್ಹ ಹಾಗೂ ಆಜ್ಞಾಧಾರಕ ಪ್ರಾಣಿ. ಋಗ್ವೇದದಲ್ಲಿಯೂ ಸಹ ನಾಯಿಯ ರಕ್ಷಕ ಪಾತ್ರವನ್ನು ದೇವೇಂದ್ರನು ನಾಯಿಗಳ ಮಾತೆಯಾದ ಸರಮಳನ್ನು ಕಳೆದುಹೋಗಿರುವ ಹಸುವನ್ನು ಹುಡುಕಲು ಕಳುಹಿಸಿಕೊಟ್ಟಾಗ ಒಪ್ಪಿಕೊಳ್ಳುವನು ಎಂಬುದನ್ನು ಪ್ರಸ್ತುತಪಡಿಸಲಾಗಿದೆ.

ಕೆಲವು ನಿರೂಪಣೆಗಳಲ್ಲಿ ನಾಯಿಗಳನ್ನು ಸಾವಿಗೆ ಸಂಬಂಧಿಸಿದ ಪ್ರಾಣಿಯೆಂದು ಹಾಗೂ ಅದಕ್ಕಾಗಿಯೇ ಸರಮಳ ಮಕ್ಕಳಾದ ಸರಮೇಯವು ಸಾವಿನ ದೈವ ಯಮನ ಸಂಗಾತಿಯೆಂದು ವಿವರಿಸಲಾಗಿದೆ. ನಾಯಿಗಳು ನಾಗರಿಕತೆಯೊಂದಿಗೆ ಸಂಬಂಧಿಸಿರುವುದಿಲ್ಲ. ಆದರೆ ಅವುಗಳನ್ನು ಕಾಡು ಮೇಡುಗಳಲ್ಲಿ ವಾಸಿಸುವ ಪ್ರಾಣಿಯೆಂದು, ಹಾಗಾಗಿಯೇ ಅವುಗಳು ದತ್ತಾತ್ರೇಯರಂತಹ ಅವಧೂತರೊಂದಿಗೆ ಜೊತೆಯಾಗಿರುವುದು. ನಾಯಿಯು ಶಿವನ ಭಯಾನಕ ರೂಪವಾದ ಭೈರವನ ವಾಹನ. ನಾಯಿಯನ್ನು ಎಷ್ಟರ ಮಟ್ಟಿಗೆ ಅಶುಭ ಸೂಚಕವನ್ನಾಗಿ ಪರಿಗಣಿಸುವರೆಂದರೆ ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಧರ್ಮರಾಯನಿಗೆ ಅವನೊಂದಿಗಿದ್ದ ನಾಯಿಯೊಂದಿಗೆ ಸ್ವರ್ಗದೊಳಗೆ ಪ್ರವೇಶವನ್ನು ನಿರಾಕರಿಸಲಾಯಿತು.

ನಾಯಿಗಳು ಕೊಳಕಾದ ಹಾಗೂ ಅಸಹ್ಯವಾದ ಕಸದಲ್ಲಿ ಹೊರಳಾಡುವುದರಿಂದ ಅದು ಅಸಹ್ಯಕರವಾದದ್ದು, ಹಾಗಾಗಿಯೇ ಅವುಗಳನ್ನು ಮಂದಿರದ ಬಳಿಗೆ ಬರಲು ಬಿಡುವುದಿಲ್ಲವೆಂದು ಕೆಲವರು ವಾದಿಸುತ್ತಾರೆ. ಆದರೆ ಈ ಯಾವ ವಾದಗಳೂ ಸರಿಯಾದದ್ದಲ್ಲ. ಈ ವಾದಗಳು ಸಬೂಬುಗಳಷ್ಟೇ ಹೊರತು ಅವುಗಳು ಸರಿಯಾದದ್ದಲ್ಲ. ಸರಿಯಾಗಿ ಹೇಳಬೇಕೆಂದರೆ ನಾಯಿಗಳು ಹಿಂದೂಧರ್ಮದಲ್ಲಿ ಭಕ್ತಿಯ ಸಂಕೇತ. ಆದರೂ ಹಿಂದುಗಳು ವಾನರ ದೈವವಾದ ಹನುಮಂತನನ್ನೇ ಪರಮ ಭಕ್ತನೆಂದು ಪೂಜಿಸುವರು. ಪುರಾಣಗಳಲ್ಲಿರುವುದನ್ನು ಅಕ್ಷರಷಃವಾಗಿ ಪರಿಗಣಿಸಬಾರದು ಏಕೆಂದರೆ ಅವುಗಳು ಕೇವಲ ಸಂಕೇತಾತ್ಮಕವಾದದ್ದು. ಪುರಾಣ ಕಥನಗಳು ಹಾಗೂ ಸಂಕೇತಗಳು, ಸಂಹಿತೆಗಳು ಹಾಗೂ ಇವುಗಳು ಕೇವಲ ಮಾಧ್ಯಮ. ನಮ್ಮ ಪೂರ್ವಜರು ಈ ಮಾಧ್ಯಮದ ಮೂಲಕ ಗಹನವಾದ ಸಂದೇಶಗಳನ್ನು ನೀಡುತ್ತಿದ್ದರು. ನಾಯಿಯನ್ನು ಅಪವಿತ್ರ ಪ್ರಾಣಿಯೆಂದು ಪರಿಗಣಿಸಿದರೆ, ಅದರ ಅರ್ಥ ನಾಯಿಯು ಅಪವಿತ್ರ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ ಎಂದು. ಈ ಅಪವಿತ್ರ ಅಲೋಚನೆಗಳೆಂದರೇನು ಹಾಗೂ ಯಾವುದು?

ಭಾಗವತ ಪುರಾಣದಲ್ಲಿನ ವಿರಕ್ತ ಭರತನ ಕಥೆ ನಮಗೆ ಗೊತ್ತಿರಬೇಕು. ಆ ಕಥೆಯಲ್ಲಿ ಭರತನು ಸರ್ವವನ್ನೂ ತ್ಯಜಿಸಿದ್ದರೂ ನಿಧಾನವಾಗಿ ಅವನು ಆಶ್ರಮದಲ್ಲಿರುವ ಜಿಂಕೆಯೊಂದರ ಬಗ್ಗೆ ಆಸಕ್ತಿಯನ್ನು ಬೆಳಸಿಕೊಳ್ಳುವನು. ಇದರ ಫಲವಾಗಿ ಅವನಿಗೆ ಮೋಕ್ಷವನ್ನು ಹೊಂದಲು ಆಗದೆ ಮತ್ತೆ ಭೂಮಿಯ ಮೇಲೆ ಜಿಂಕೆಯಾಗಿ ಜನಿಸಿ ಜನನ-ಮರಣಗಳ ವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುವನು. ಅಸಕ್ತಿಯು ನಿಮ್ಮನ್ನು ಬಲೆಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡುವುದು. ಇದೇ ಹಿಂದೂ ತತ್ತ್ವಶಾಸ್ತ್ರದ ಪ್ರಮುಖವಾದ ಸೂತ್ರ.

ಈಗ ನಾಯಿಯೊಂದು ನಿಮ್ಮನ್ನು ಪ್ರೀತಿ ಹಾಗೂ ಕುತೂಹಲದಿಂದ ನೋಡುತ್ತಿರುವುದೆಂದು ಊಹಿಸಿಕೊಳ್ಳಿ - ಅದು ನಿಮ್ಮನ್ನು ಪೂಜ್ಯಭಾವನೆಯಿಂದ ನೋಡುವುದು ಹಾಗೂ ಅದರ ವರ್ತನೆಯಿಂದಾಗಿ ನಿಮ್ಮ ಹೃದಯವು ಕರಗುವುದು. ನಿಮ್ಮ ಮನೆಯಲ್ಲಿ ಸಾಕು ನಾಯಿಯೊಂದಿದ್ದಲ್ಲಿ ಅದು ಸದಾ ನಿಮ್ಮಿಂದ ಅದರ ವರ್ತನೆಗಳನ್ನು ಸಮ್ಮತಿಸುವುದನ್ನು ಅಪೇಕ್ಷಿಸುತ್ತದೆ. ಅದು ಬೇಡಿದ ಗಮನವನ್ನು ನೀವು ನೀಡಿದಲ್ಲಿ ಅದು ಬಾಲವನ್ನಲ್ಲಾಡಿಸುವುದು, ಇಲ್ಲದಿದ್ದಲ್ಲಿ ಜೋರಾಗಿ ಬೊಗಳುವುದು.

ಈಗ ಯತಿಯೊಬ್ಬನನ್ನು ನಾಯಿಗಳು ಸುತ್ತುವರೆದಿರುವುದನ್ನು ಕಲ್ಪಿಸಿಕೊಳ್ಳಿ. ಆ ಯತಿಯು ನಾಯಿಯ ಪ್ರೀತಿಗೆ ಶರಣಾಗುವನೆ ಅಥವಾ ಕಡೆಗಣಿಸುವನೆ? ಅವನು ಹೇಗೆ ಭರತನು ಜಿಂಕೆಯೊಂದಿಗೆ ಆಸಕ್ತಿಯನ್ನು ಬೆಳಸಿಕೊಂಡಂತೆ ಈ ನಾಯಿಗಳೊಂದಿಗೂ ಆಸಕ್ತಿಯನ್ನು ಬೆಳಸಿಕೊಳ್ಳುವನೆ? ಅವನಿಗೆ ಜನನ-ಮರಣಗಳ ಸಂಕೋಲೆಯಿಂದ ಹೊರಬರಬೇಕೆನಿಸಿದ್ದಲ್ಲಿ ಅವನು ಈ ರೀತಿಯ ಆಸಕ್ತಿಯನ್ನು ದಾಟಲೇಬೇಕು. ನಾಯಿಯು ತನ್ನ ಯಜಮಾನನಿಗೆ ಸಂಪೂರ್ಣವಾದ ಹಾಗೂ ಶರತ್ತುರಹಿತ ಪ್ರೀತಿ ಹಾಗೂ ಭಕ್ತಿಯನ್ನು ನೀಡುವುದರಿಂದ ಅದು ಯಜಮಾನನಿಗೆ ಕಟ್ಟ ಕಡೆಯ ಪ್ರಲೋಭನೆಯಾಗುವುದು. ಇದರ ಮುಂದೆ ಬೇರಾವ ಪ್ರಲೋಭನೆಯೂ (ಅಪ್ಸರೆಯರ ನಾಟ್ಯವೂ) ಹೆಚ್ಚಿನದ್ದಲ್ಲ. ಅವಧೂತ ದತ್ತಾತ್ರೇಯರು ತಮ್ಮ ಸುತ್ತ ನಾಲ್ಕು ನಾಯಿಗಳೊಂದಿಗೆ ನಡೆಯುತ್ತಿದ್ದರೆಂದರೆ ಅದು ಅವರಲ್ಲಿದ್ದ ನಿಶ್ಚಿತವಾದ ನಿರ್ಲಿಪ್ತತೆ. ನಾಯಿಗಳು ಅವರನ್ನು ಅನುಸರಿಸುವುದೇ ಹೊರತು ಅವರು ಅವುಗಳನ್ನು ಮುನ್ನಡೆಸುವುದಿಲ್ಲ.

ನಾಯಿಗಳು ಪ್ರಾದೇಶಿಕ ಪ್ರಾಣಿ. ನಾಯಿಗೆ ತನ್ನ ಯಜಮಾನನೇ ಒಂದು ಪ್ರದೇಶ ಹಾಗೂ ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಪ್ರದೇಶದೊಳಗೆ ಬೇರೆ ಯಾರಾದರೂ ಪ್ರವೇಶಿಸುವ ಪ್ರಯತ್ನ ಮಾಡಿದಲ್ಲಿ ಅದು ಅವರೆಡೆಗೆ ತಿರುಗಿ ದುರುಗುಟ್ಟಿಕೊಂಡು ನೋಡುವುದು. ಈ ರೀತಿಯ ವರ್ತನೆಗಳನ್ನು ಮನುಷ್ಯರಲ್ಲಿ ಕಂಡುಬರುವುದಿಲ್ಲವೆಂಬುದನ್ನು ನಮ್ಮ ಪೂರ್ವಜರು ಅರಿತಿದ್ದರು.

ಮಾನವನೂ ಸಹ ಪ್ರಾದೇಶಿಕ ಜೀವಿ. ಪ್ರದೇಶವೊಂದು ಮನುಷ್ಯನಿಗೆ ಒಂದು ರೀತಿಯ ಗುರುತು ಹಾಗೂ ನ್ಯಾಯಸಮ್ಮತಿಯ ಭಾವನೆಗಳನ್ನು ತಂದುಕೊಡುವುದು. ಸನ್ನಿವೇಶವು ನಾವು ಯಾರು ಎಂಬುದನ್ನು ಸ್ಥಾಪಿಸುವುದು. ಕೈಗಾರಿಕೋದ್ಯಮಿಯ ಗುರುತು ಅವನು ಹೊಂದಿರುವ ಕೈಗಾರಿಕೆಯಿಂದ ಬರುವುದು. ಅಧಿಕಾರಿಯೊಬ್ಬನ ಗುರುತು ಅವನು ಯಾವ ಹುದ್ದೆಯಲ್ಲಿ ಇರುವನೋ ಅದರ ಮೇಲೆ ಅವಲಂಬಿಸಿರುವುದು. ರಾಜಕಾರಿಣಿಯೊಬ್ಬನ ಗುರುತು ಅವನ ಪಕ್ಷದಲ್ಲಿ ಹೊಂದಿರುವ ಸ್ಥಾನದಮೇಲೆ ಹಾಗೂ ಶಾಸನಸಭೆಯಲ್ಲಿ ಮಂತ್ರಿ ಅಥವಾ ಎಂಎಲ್ಎ ಹುದ್ದೆಯಮೇಲೆ ಅವಲಂಬಿಸಿರುವುದು. ಯಾರಿಗಾದರೂ ಗುರುತನ್ನು ನೀಡುವ ಸನ್ನಿವೇಶಕ್ಕೆ ಯಾವುದೇ ಅಪಾಯವಾಗುವ ಸಂದರ್ಭ ಬಂದಾಗ ಅವರು ನಾಯಿಯು ಬೊಗಳುವಂತೆ ಪ್ರತಿಕ್ರಿಯಿಸುತ್ತಾರೆ. ನಾವು ನಮ್ಮದೇ ಆದ ಪ್ರದೇಶವನ್ನು (ಬರೀ ಭೌತಿಕವಲ್ಲದೇ ಬೌದ್ಧಿಕ ಹಾಗೂ ಭಾವನಾತ್ಮಕ) ಕಳೆದುಕೊಂಡಲ್ಲಿ ನಮ್ಮ ಗುರುತನ್ನು ಕಳೆದುಕೊಂಡೇವೇನೋ ಎಂದು ಭಾವಿಸುತ್ತೇವೆ. ಆ ಭಾವನೆಯು ನಮ್ಮನ್ನು ಭೀತಿಯಲ್ಲಿ ಮುಳುಗಿಸುತ್ತದೆ. ನಮ್ಮ ಪ್ರದೇಶವು ಮರಳಿ ನಮಗೆ ಬಂದಾಗ ನಾವು ಬಾಲವನ್ನು ಅಲ್ಲಾಡಿಸುವ ನಾಯಿಯಂತಾಗುತ್ತೇವೆ. ಹಾಗೇ ನಮ್ಮ ಪ್ರದೇಶಕ್ಕೆ ಅಪಾಯವುಂಟಾಗುವ ಸಂದರ್ಭ ಬಂದಾಗ ನಾವು ನಾಯಿಯಂತೆ ಬೊಗಳುತ್ತೇವೆ ಹಾಗೂ ನಮ್ಮ ಪ್ರದೇಶವನ್ನು ಇತರರು ಗುರುತಿಸದಿದ್ದಾಗ ನಾವು ನಾಯಿಯಂತೆ ಊಳಿಡುತ್ತೇವೆ. ಈ ರೀತಿಯ ನಾಯಿಯಂತಹ ವರ್ತನೆ ಹಿಂದೆ ಇರುವುದೇ ಭಯ, ನಾವೆಲ್ಲಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೋ ಎಂಬ ಭೀತಿ.

ಈ ರೀತಿಯ ಭಯವನ್ನು ಹೋಗಲಾಡಿಸುವವನೇ ಭೈರವ. ಶಿವನ ಈ ಭೈರವ ರೂಪವು ನಮ್ಮನ್ನು ಭಯಪಡಿಸುವುದೇಕೆಂದರೆ ಭೈರವನು ನಮ್ಮಲ್ಲಿನ ಮೂಲಭೂತವಾದ ಪ್ರಾದೇಶಿಕತೆಯೆಡಗಿನ ಸ್ವಭಾವವನ್ನು ಅಣಕಿಸುವುದರಿಂದ. ದೆಹಲಿ ಹಾಗೂ ವಾರಣಾಸಿಯ ಕಾಲಭೈರವ ಮಂದಿರಗಳಲ್ಲಿ ಭೈರವನಿಗೆ ಮಧ್ಯವನ್ನು ನೈವೇದ್ಯವನ್ನಾಗಿ ನೀಡುವರು. ಏಕೆಂದರೆ ಮಧ್ಯವು ನಿಮ್ಮಲ್ಲಿನ ನಿರ್ಣಯಾತ್ಮಕ ಶಕ್ತಿಯನ್ನು ಮರೆಮಾಡುವುದು. ಈ ರೀತಿಯ ಮರೆಯಾಗಿರುವ ನಿರ್ಣಯಾತ್ಮಕ ಶಕ್ತಿಯಿಂದಾಗಿ ನಮ್ಮೊಡನೆ ಇರುವ ಪ್ರದೇಶದಿಂದ ಗುರುತು ಉಂಟಾಗುವುದೆಂಬ ವಕ್ರವಾದ ಅಲೋಚನೆಯು ಉದ್ಭವವಾಗುವುದು. ಕೈಗಾರಿಕೋದ್ಯಮಿಯು ತನ್ನ ಕೈಗಾರಿಕೆ ಎಂಬ ಅಸ್ತಿತ್ವಕ್ಕೆ ಜೋತುಬಿದ್ದು ಅದಕ್ಕಾಗಿ ಎಷ್ಟೇ ಹೋರಾಡಿದರೂ ಒಂದು ದಿನ ಸಾವಿನ ಅಧಿಪತಿಯಾದ ಯಮನು ಸರಮೆಗಳೊಂದಿಗೆ (ನಾಯಿಗಳು) ಬಂದು ತನ್ನನ್ನು ತನ್ನ ಅಸ್ತಿತ್ವದಿಂದ ಎಳೆದೊಯ್ಯುವನೆಂಬುದನ್ನು ಮರೆಯುವನು. ಅದೇ ರೀತಿ ರಾಜಕಾರಣಿಗೂ, ಅಧಿಕಾರಿಗೂ, ಕಲಾಕಾರರಿಗೂ ಮತ್ತು ಬರಹಗಾರರಿಗೂ ಆಗುವುದು.

ನಾವು ಜತನದಿಂದ ಕಾಪಾಡಿಕೊಂಡು ಬಂದಿರುವ ನಮ್ಮಲ್ಲಿನ ಭೌತಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಪ್ರದೇಶವು ನಮ್ಮಿಂದ ದೂರಾದಾಗ ನಮ್ಮನ್ನು ಅಧೀರರನ್ನಾಗಿಸುತ್ತವೆ ಹಾಗೂ ಇದು ನಾಯಿಯ ಮೂಳೆಗಿಂತ ಬೇರೆಯಾದದ್ದಲ್ಲ. ನಾವು ಸಾಯುವವರೆಗೂ ಅದಕ್ಕೇ ಜೋತುಬಿಳುತ್ತೇವೆ ಹಾಗೂ ಅದಕ್ಕಾಗಿ ಹೋರಾಡುತ್ತಲೇ ಇರುತ್ತೇವೆ. ನಾವು ಸತ್ತಮೇಲೆ ನಮ್ಮ ಪಾರ್ಥಿವ ಶರೀರವು ಸ್ಮಶಾನವನ್ನು ತಲುಪಿದಾಗ ಅಲ್ಲಿ ನಮಗೆ ಕಂಡುಬರುವುದೇನೆಂದರೆ ಪಾನಮತ್ತನಾದ ಭೈರವನು ನಾಯಿಯೊಂದರ ಮೇಲೆ ಕುಳಿತು, ನಾವು ವ್ಯರ್ಥವಾದ ವಿಷಯಗಳನ್ನು ಬೆನ್ನಟ್ಟಿ ನಮ್ಮ ಜೀವನವನ್ನು ಹಾಳುಮಾಡಿಕೊಂಡಿದ್ದಕ್ಕಾಗಿ ನಮ್ಮೆಡೆಗೆ ಗಹಗಹಿಸಿ ನಗುತ್ತಿರುವ ದೃಶ್ಯ. 





No comments:

Post a Comment

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ

ಹಿಂದೂ ಧರ್ಮದ ಬಗ್ಗೆ ಒಂದು ಪ್ರಸ್ತಾವನೆ ಹಿಂದೂ ಧರ್ಮದ ಇತಿಹಾಸವು 5000 ವರ್ಷಗಳಿಗೂ ಹಿಂದಕ್ಕೆ ಹರಡಿದೆ ಮತ್ತು ಎಂಟು ಹಂತಗಳಾಗಿ ಒಂದರಲ್ಲೊಂದು ಸೇರಿಕೊಂಡಂತ...